ಬಹುಕೋಟಿ ರೂಪಾಯಿ ಹವಾಲ ಹಗರಣ ಆರೋಪ ಎದುರಿಸುತ್ತಿರುವ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧುಕೋಡಾ ಅಧಿಕಾರಿಗಳನ್ನು ಲೆಕ್ಕಿಸದೆ ಶನಿವಾರ ಜಾರ್ಖಂಡ್ ವಿಧಾನಸಭಾ ಚುನಾವಣಾ ಪ್ರಚಾರ ಅಖಾಡಕ್ಕೆ ಧುಮುಕಿದ್ದಾರೆ. ಅಲ್ಲದೇ, ತನ್ನ ವಿರುದ್ಧದ 2,500ಕೋಟಿ ರೂ.ಹವಾಲ ಹಗರಣದ ಆರೋಪ ಸಾಬೀತಾದ್ರೆ ತಾನು ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ.
'ರಾಜಕೀಯ ಸಂಚಿನಿಂದ ತನ್ನ ತೇಜೋವಧೆ ಮಾಡುತ್ತಿದ್ದಾರೆ. ಆ ಸಂಚುಗಾರರು ತನ್ನ ಕೊಲೆ ಮಾಡಬಹುದು ಎಂಬ ಭಯ ನನ್ನ ಕಾಡುತ್ತಿದೆ ಎಂದು ಅಲವತ್ತುಕೊಂಡಿರುವ ಕೋಡಾ, ನಾನು ವಿದೇಶಗಳಲ್ಲಿ ಬಂಡವಾಳ ಹೂಡಿರುವುದಾಗಲಿ ಅಥವಾ ಅಕ್ರಮ ಆಸ್ತಿಯನ್ನು ವಿದೇಶಗಳಲ್ಲಿ ಮಾಡಿರುವುದಾಗಿ ತನಿಖಾ ಸಂಸ್ಥೆ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಹೊಂದುವುದಾಗಿ' ತಿಳಿಸಿದ್ದಾರೆ.
ಜಾರ್ಖಂಡ್ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಸೂಯೆ ಹೊಂದಿರುವ ಜನಗಳೇ ನನ್ನ ವಿರುದ್ಧ ಪಿತೂರಿ ಹೂಡಿದ್ದಾರೆ ಎಂದು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಬಹುಕೋಟಿ ಹವಾಲ ಹಗರಣದ ಆರೋಪ ಎದುರಿಸುತ್ತಿರುವ ಕೋಡಾ ಅವರು ಶುಕ್ರವಾರ ರಾಂಚಿಯಲ್ಲಿರುವ ತಮ್ಮ ನಿವಾಸದಿಂದ ತನಿಖಾಧಿಕಾರಿಗಳಿಗೆ ಸುಳ್ಳು ಹೇಳಿ ನಾಪತ್ತೆಯಾಗಿದ್ದರು.
ಇಷ್ಟೆಲ್ಲಾ ಹಗರಣಗಳ ಆರೋಪಗಳನ್ನು ಕೋಡಾ ಎದುರಿಸುತ್ತಿದ್ದರು ಕೂಡ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದಾಗ ನೂರಾರು ಮಂದಿ ಬೆಂಬಲಿಗರು ಹೂವಿನ ಹಾರ ಹಾಕಿ ಅದ್ದೂರಿಯಾಗಿ ಸ್ವಾಗತ ಕೋರಿ ವಾಹನದಲ್ಲಿ ಮೆರವಣಿಗೆ ಮಾಡಿಸಿದ್ದರು. ನಾನು ಸರಿಯಾದ ಸಮಯದಲ್ಲಿ ಎಲ್ಲವನ್ನೂ ಜನತೆಗೆ ಬಹಿರಂಗಪಡಿಸುತ್ತೇನೆ ಎಂಬುದಾಗಿಯೂ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.