ಉತ್ತರ ಪ್ರದೇಶದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಸೋಲನ್ನನುಭವಿಸಿದ ನಂತರ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಇನ್ನು ಮುಂದೆ ಮಾಜಿ ಬಿಜೆಪಿ ನೇತಾರ ಕಲ್ಯಾಣ್ ಸಿಂಗ್ ಜೊತೆ ಯಾವುದೇ ರೀತಿಯ ಮೈತ್ರಿಯನ್ನಿಟ್ಟುಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಕಲ್ಯಾಣ ಸಿಂಗ್ ಸಮಾಜವಾದಿ ಪಕ್ಷದ ಅಂಗವಾಗಿಲ್ಲ. ಅಂದ ಹಾಗೆ ಅವರು ತಾವು ಯಾವುದೇ ಪಕ್ಷದ ಅಂಗವಲ್ಲ ಎಂದು ಸ್ವಯಂ ಹೇಳಿಕೊಂಡಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಮುಲಾಯಂ ತಿಳಿಸಿದ್ದಾರೆ.
ಕಲ್ಯಾಣ್ ಸಿಂಗ್ ಬಯಸಿದರೂ ನಾವು ಇನ್ಮುಂದೆ ಅವರೊಂದಿಗೆ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಫಿರೋಜಾಬಾದ್‌ನಲ್ಲಿ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷವು ಈ ತೀರ್ಮಾನ ಕೈಗೊಂಡಿದೆ.
ಈ ಮೊದಲು ಯಾದವ್ ಕುಟುಂಬದ ಕೋಟೆಯೆಂದೇ ಬಿಂಬಿಸಲಾಗಿದ್ದ ಫಿರೋಜಾಬಾದ್‌ನಲ್ಲಿ ಮುಲಾಯಂ ಸಿಂಗ್‌ರ ಸೊಸೆ ಡಿಂಪಲ್ ಯಾದವ್ ರಾಜ್ ಬಬ್ಬರ್ ವಿರುದ್ಧ 85ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು.