ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನಾಯರಾಣಪುರದ ದಾಚೇಪಲ್ಲಿ ಮಂಡಲಕ್ಕೆ ಸೇರಿದ ಮನೆಯೊಂದರಲ್ಲಿ ಜಿಲೆಟಿನ್ ಕಡ್ಡಿ ಸ್ಫೋಟಿಸಿ, ಸ್ಫೋಟದ ತೀವ್ರತೆಯಿಂದಾಗಿ 15 ಜನ ಸಾವನ್ನಪ್ಪಿದ್ದು, ಇತರ 20 ಮಂದಿ ಗಾಯಗೊಂಡಿದ್ದಾರೆ.
ಸ್ಫೋಟದ ಭೀಕರತೆಗೆ ಸುತ್ತಮುತ್ತಲಿನ 10 ಮನೆಗಳು ನಾಶವಾಗಿದೆ. ಸ್ಫೋಟ ಸಂಭವಿಸಿದ ಮನೆಯಲ್ಲಿ ಅಕ್ರಮವಾಗಿ ಜಿಲೆಟಿನ್ ಕಡ್ಡಿಗಳನ್ನು ಸಂಗ್ರಹಿಸಿಡಲಾಗಿತ್ತು. ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ಸ್ಫೋಟ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯ ನಂತರ ಸ್ಥಳೀಯ ಪೊಲೀಸರು ತಿಳಿಸಿದರು. ಈ ಘಟನೆಯಿಂದ ಗಾಯಗೊಂಡ ಮಂದಿಯನ್ನು ಗುಂಟೂರು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಗುತ್ತಿಗೆಗಾರ ಕೋಟೇಶ್ವರ ರಾವ್ ಎಂಬುವವರಿಗೆ ಸೇರಿದ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಜಿಲೆಟಿನ್ ಕಡ್ಡಿಗಳನ್ನು ಗಣಿ ಮಾಲೀಕರಿಗೆ ಮಾರಲು ಸಂಗ್ರಹಿಸಿಡಲಾಗಿತ್ತು ಎನ್ನಲಾಗಿದೆ. ಜಿಲೆಟಿನ್ ಕಡ್ಡಿಗಳ ಸ್ಫೋಟಕ್ಕೆ ಮುಂಚಿತವಾಗಿ ಇಲ್ಲಿ ಗ್ಯಾಸ್ ಸಿಲಿಂಡರ್ ಒಂದು ಸ್ಫೋಟಿಸಿತ್ತು ಎನ್ನಲಾಗಿದೆ.