ಶಂಕಿತ ಲಷ್ಕರೆ ಉಗ್ರ ಡೇವಿಡ್ ಹೆಡ್ಲಿಯೊಂದಿಗೆ ಸಂಪರ್ಕವಿದೆ ಎಂದು ಹೇಳಲಾಗಿರುವ, ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಪುತ್ರ ರಾಹುಲ್ ಭಟ್‌ಗೆ ಮುಂಬೈ ತೊರೆಯದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು ತಾಕೀತು ಮಾಡಿದೆ. ಒಂದೊಮ್ಮೆ ನಗರವನ್ನು ತೊರೆಯಬೇಕಿದ್ದರೆ, ತನ್ನ ಪ್ರಯಾಣದ ಯೋಜನೆಗಳನ್ನು ಮುಂದಾಗಿ ತಿಳಿಸುವಂತೆಯೂ ತನಿಖಾ ಸಂಸ್ಥೆ ಹೇಳಿದೆ.
ಡೇವಿಡ್ ಕೋಲ್ಮನ್ ಹೆಡ್ಲಿ ರಾಹುಲ್‌ನನ್ನು ಭೇಟಿಯಾಗಿರುವ ವಿಚಾರ ಹೊರಬೀಳುತ್ತಿರುವಂತೆ ಎನ್ಐಎ ರಾಹುಲ್‌ನನ್ನು ಪ್ರಶ್ನಿಸಲು ಆರಂಭಿಸಿತ್ತು. ಭಾರತ ಹಾಗೂ ಅಮೆರಿಕದಲ್ಲಿ ಬುಡಮೇಲು ಕೃತ್ಯಗಳನ್ನು ನಡೆಸುವ ಯೋಜನೆ ಹೊಂದಿದ್ದ ಹೆಡ್ಲಿ ತನ್ನ ಸಹಚರನೊಂದಿಗೆ ನ್ಯೂಯಾರ್ಕ್‌ನಲ್ಲಿ ಎಫ್‌ಬಿಐ ಬಲೆಗೆ ಬಿದ್ದಿದ್ದ.
ಹೆಡ್ಲಿ ಕಳೆದ ವರ್ಷ ಉಗ್ರರು ಮುಂಬೈ ಮೇಲೆ ನಡೆಸಿದ್ದ ಮಾರಣಾಂತಿಕ ದಾಳಿಗೆ ಮುಂಚಿತವಾಗಿ ಮುಂಬೈನಲ್ಲಿ ಐದು ದಿನಗಳ ಕಾಲ ತಂಗಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.
"ಹೆಡ್ಲಿ ತನ್ನ ಮುಂಬೈ ಭೇಟಿಯ ವೇಳೆಗೆ ರಾಹುಲ್‌ನನ್ನು ಭೇಟಿಯಾಗಿದ್ದ. ಇದಲ್ಲದೆ, ರಾಹುಲ್ ಹೆಸರು ಹೆಡ್ಲಿಯ ಸಹ ಆರೋಪಿ ತಹವೂರ್ ರಾಣಾನೊಂದಿಗಿನ ಇಮೇಲ್ ಸಂದೇಶದಲ್ಲಿ ಹಲವು ಬಾರಿ ಪ್ರಸ್ತಾಪವಾಗಿದೆ.
ಮುಂಬೈ ಪೊಲೀಸರ ಪ್ರಕಾರ ರಾಹುಲ್‌ಗೆ ಹೆಡ್ಲಿ ಜಿಮ್‌ನಲ್ಲಿ ಪರಿಚಯಗೊಂಡಿದ್ದ. ಇದಲ್ಲದೆ ರಾಹುಲ್ ಬ್ರೋಕರ್ ಮೂಲಕ ಹೆಡ್ಲಿಗೆ ಬ್ರೀಚ್ ಕ್ಯಾಂಡಿ ಆಸ್ಪತ್ರೆ ಪ್ರದೇಶದಲ್ಲಿ ಮನೆ ಹುಡುಕಿಕೊಡಲು ಸಹಾಯ ಮಾಡಿದ್ದ.