ಎಫ್‌ಬಿಐ ಬಂಧನಕ್ಕೀಡಾಗಿರುವ ಶಂಕಿತ ಉಗ್ರ ಡೇವಿಡ್ ಹೆಡ್ಲಿ ಅಣುಸ್ಥಾವರಗಳಿರುವ ರಾಜ್ಯಗಳಿಗೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತವಿರುವ ಅಣುಸ್ಥಾವರಗಳ ಮೇಲೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ.
ಅಣುಸ್ಥಾವರಗಳಿರುವ ರಾಜ್ಯ ಸರ್ಕಾರಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಗಸ್ತು ಹಾಗೂ ಪಹರೆಯನ್ನು ಹೆಚ್ಚಿಸುವಂತೆ ಹೇಳಲಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ಭಾರತದಲ್ಲಿ ಲಷ್ಕರೆ ಪರವಾಗಿ ಉಗ್ರವಾದಿ ಕೃತ್ಯಗಳನ್ನು ನಡೆಸಲು ಮುಂದಾಗಿದ್ದನೆಂದು ಆರೋಪಿಸಲಾಗಿರುವ ಹೆಡ್ಲಿಯು ಗುಜರಾತ್, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶಗಳಿಗೆ ಭೇಟಿ ನೀಡಿದ್ದು, ಇಲ್ಲಿ ಪ್ರಮುಖ ಅಣುಸ್ಥಾವರಗಳಿವೆ. ಹೆಡ್ಲಿಯ ಭೇಟಿಯು ಅಣುಸ್ಥಾವರಗಳು ಉಗ್ರರ ಪಟ್ಟಿಯಲ್ಲಿರಬಹುದು ಎಂಬ ಶಂಕೆಯನ್ನು ಹೆಚ್ಚಿಸಿದೆ.
ಇದು ಮುನ್ನೆಚ್ಚರಿಕಾ ಕ್ರಮವಾಗಿದೆ. ರಾಜ್ಯಗಳಿಗೆ ಕಾವಲು ಮತ್ತು ಗಸ್ತುತಿರುಗುವಿಕೆಯನ್ನು ಹೆಚ್ಚಿಸಲು ಹೇಳಲಾಗಿದ್ದು, ಯಾವುದೇ ಸಂಭಾವ್ಯ ವಿಧ್ವಂಸಕ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಇಲಾಖಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಉತ್ತರ ಪ್ರದೇಶದ ನರೋರಾ, ಕರ್ನಾಟಕದ ಕೈಗಾ, ಮಹಾರಾಷ್ಟ್ರದ ತಾರಾಪುರ, ತಮಿಳ್ನಾಡಿನ ಕಲ್ಪಾಕಂ, ಗುಜರಾತಿನ ಕಕ್ರಪಾರ್ ಮತ್ತು ರಾಜಸ್ಥಾನದ ಕೋಟಾ- ಇವುಗಳು ರಾಷ್ಟ್ರದಲ್ಲಿ ಕಾರ್ಯಾಚರಿಸುತ್ತಿರುವ ಆರು ಪ್ರಮುಖ ಅಣುಸ್ಥಾವರಗಳಾಗಿವೆ. ಇದಲ್ಲದೆ, ಟ್ರಾಂಬೆಯಲ್ಲಿರುವ ಬಾಬಾ ಅಟೋಮಿಕ್ ರೀಸರ್ಚ್ ಸೆಂಟರ್ ಸೇರಿದಂತೆ ಹಲವಾರು ಸಂಶೋಧನಾ ಹಾಗೂ ಅಭಿವೃದ್ಧಿ ಕೇಂದ್ರಗಳಿವೆ.