ವಾಣಿಜ್ಯ ನಗರಿ ಮುಂಬೈ ಮೇಲೆ ಉಗ್ರರ ದಾಳಿ ನಡೆದ ನಂತರ ಕೇಂದ್ರ ಗೃಹ ಸಚಿವ ಸ್ಥಾನ ಕಳೆದುಕೊಂಡು 'ನಿರುದ್ಯೋಗಿ'ಯಾಗಿರುವ ಶಿವರಾಜ್ ಪಾಟೀಲ್ ಈಗ ಆತ್ಮಕಥೆ ಬರೆಯುತ್ತಿದ್ದಾರಂತೆ!
ಸುದ್ದಿಸಂಸ್ಥೆಯ ಜೊತೆಗೆ ಮಾತನಾಡಿದ ಶಿವರಾಜ್ ಪಾಟೀಲ್, ಇದು ಕೇವಲ ತಮ್ಮ ಜೀವನದ ನೆನಪುಗಳ ಬುತ್ತಿಯಷ್ಟೇ. ಇದರಲ್ಲಿ ಬಿಸಿ ಬಿಸಿ ಸುದ್ದಿ ಏನೂ ಇರುವುದಿಲ್ಲ ಎಂದು ಹೇಳಿದ್ದಾರೆ.
ತಾವು ರಾಜಕೀಯ ಸಂಚಲನ ಮೂಡಿಸಲು ಅಥವಾ ಹಣ ಮಾಡುವ ಉದ್ದೇಶದಿಂದ ಆತ್ಮಕಥೆ ಬರೆಯುತ್ತಿಲ್ಲ ಎಂದ ಪಾಟೀಲ್, ಅದನ್ನು ಯಾವುದೇ ಕ್ಷಣದಲ್ಲಾದರೂ ಬಿಡುಗಡೆ ಮಾಡಬಹುದು ಎಂದಿದ್ದಾರೆ.
ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ಬಲಗೈ ಬಂಟನಾಗಿದ್ದ ಶಿವರಾಜ್ ಪಾಟೀಲ್ ಅವರು, ಗೃಹ ಸಚಿವರಾಗಿ ಸಮರ್ಥ ನಡವಳಿಕೆ ತೋರದಿದ್ದ ಪರಿಣಾಮ ಹಾಗೂ ರಾಜಕೀಯವಾಗಿ ದುರ್ಬಲ ಎಂಬ ಟೀಕೆಯ ಹಿನ್ನೆಲೆಯಲ್ಲಿ ಅವರನ್ನು ಸಚಿವ ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ಇದೀಗ ತೆಪ್ಪಗೆ ಕುಳಿತಿರುವ ಪಾಟೀಲ್ ಆತ್ಮಕಥೆ ರಚನೆಯಲ್ಲಿ ತೊಡಗಿದ್ದಾರೆ.