ವಂದೇ ಮಾತರಂ ಗೀತೆಯ ನಿಜಾಂಶಗಳನ್ನು ಮುಸ್ಲಿಂ ಸಮುದಾಯಕ್ಕೆ ತಿಳಿಸುವ ಉದ್ದೇಶದಿಂದ ಅದನ್ನು ಉರ್ದು ಭಾಷೆಗೆ ಅನುವಾದ ಮಾಡಿಕೊಡಬೇಕೆಂದು ಅಖಿಲ ಭಾರತ ಶಿಯಾ ವೈಯಕ್ತಿಕ ಕಾನೂನು ಮಂಡಳಿ ಕೇಂದ್ರ ಸರ್ಕಾರವನ್ನು ಕೋರಿದೆ. ವಂದೇ ಮಾತರಂ ಗೀತೆಯನ್ನು ಉರ್ದುವಿಗೆ ತರ್ಜಮೆ ಮಾಡಬೇಕೆಂದು ಕೋರಿ ಮಂಡಳಿ ಅಧ್ಯಕ್ಷ ಮೌಲಾನಾ ಮಿರ್ಜಾ ಮಹಮದ್ ಅತ್ತರ್ ರಾಷ್ಟ್ರಪತಿ ಹಾಗೂ ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ.
ವಂದೇ ಮಾತರಂ ವಿವಾದ ಇದೇ ಮೊದಲಲ್ಲ. ಸಮುದಾಯದ ಕೆಲವರು ಗೀತೆಯನ್ನು ವಿರೋಧಿಸುತ್ತಿದ್ದರೆ ಇನ್ನೂ ಕೆಲವರು ಗೀತೆಯ ಪರವಾಗಿದ್ದಾರೆ ಎಂದು ಮಂಡಳಿ ವಕ್ತಾರ ಮೌಲಾನಾ ಯಾಸೂಬ್ ಅಬ್ಬಾಸ್ ತಿಳಿಸಿದ್ದಾರೆ. ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದ್ದು ಸ್ಪಷ್ಟವಾದ ಭಾಷಾಂತರ ಲಭಿಸಿದರೆ ವಿವಾದಗಳಿಗೆ ಅಂತ್ಯ ಹಾಡಬಹುದು ಎಂದು ಅವರು ತಿಳಿಸಿದ್ದಾರೆ.
ವಂದೇ ಮಾತರಂ ಸಂಸ್ಕೃತದಲ್ಲಿರುವುದರಿಂದ ಅದನ್ನು ಅರ್ಥ ಮಾಡಿಕೊಳ್ಳುವುದು ಅನೇಕ ಮುಸ್ಲಿಮರಿಗೆ ಸಾಧ್ಯವಾಗುತ್ತಿಲ್ಲ. ನಾವು ಮಾತೃಭೂಮಿಯನ್ನು ಗೌರವಿಸುತ್ತೇವೆ. ವಂದೇ ಮಾತರಂ ಕೂಡ ಅದೇ ಭಾವನೆ ಹೊಂದಿದ್ದರೆ ಅದನ್ನು ಹಾಡಲು ನಮ್ಮ ಅಭ್ಯಂತರ ಇಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.