ಶಂಕಿತ ಉಗ್ರ ಡೇವಿಡ್ ಹೆಡ್ಲಿಯ ಮುಂಬೈ ಸಂಪರ್ಕಗಳ ಕುರಿತು ಮುಂಬೈ ಕ್ರೈಂ ಬ್ರಾಂಚ್ ಸಂಗ್ರಹಿಸಿರುವ ಮಾಹಿತಿಗಳ ಕುರಿತು, ರಾಷ್ಟ್ರೀಯ ತನಿಖಾ ಸಂಸ್ಥೆಯು ಲಭ್ಯ ದಾಖಲೆಗಳ ಸೂಕ್ಷ್ಮ ಪರಿಶೀಲನೆ ನಡೆಸುತ್ತಿದೆ.
ಹೆಡ್ಲಿ ಮುಂಬೈನ ಬ್ರೀಚ್ ಕ್ಯಾಂಡಿ ಪ್ರದೇಶದ ಅಪಾರ್ಟ್‌ಮೆಂಟ್ ಒಂದರಲ್ಲಿ ನೆಲೆಸಿದ್ದ. ವರದಿಗಳ ಪ್ರಕಾರ ಹೆಡ್ಲಿ ಶ್ಯಾಮ್ ನಿವಾಸ್ ಹೌಸಿಂಗ್ ಸೊಸೈಟಿಯ ನಿವಾಸದ ಎ ಬ್ಲಾಕ್‌ನ ಐದನೆ ಮಹಡಿಯ ಫ್ಲಾಟ್ ಒಂದರಲ್ಲಿ ನೆಲೆಸಿದ್ದ.
ನಂ.56ರ ಮನೆಯಲ್ಲಿ ಈತ ಹಿರಿಯ ಸಿಂಧಿ ದಂಪತಿಗಳೊಂದಿಗೆ ಪೇಯಿಂಗ್ ಗೆಸ್ಟ್ ಆಗಿ 2008ರ ಎಪ್ರಿಲ್‌ನಿಂದ ಹೆಚ್ಚೂಕಮ್ಮಿ ಒಂದುವರ್ಷ ನೆಲೆಸಿದ್ದ. ಈ ಕಟ್ಟಡವು ಅಮೆರಿಕ ರಾಯಭಾರ ಕಚೇರಿಯ ಸಮೀಪವೇ ಇದೆ.
ಈತನಿಗೆ ಆಶ್ರಯ ನೀಡಿದ್ದ ಸಿಂಧಿ ದಂಪತಿಗಳ ಪ್ರಕಾರ "ಹೆಡ್ಲಿ ಸ್ವೀಟ್ ಆಂಡ್ ಛಾರ್ಮಿಂಗ್". ಅಲ್ಲದೆ, ಈತನೊಬ್ಬ ಸೌಜನ್ಯಪೂರಿತ ವ್ಯಕ್ತಿಯಾಗಿದ್ದ ಹಾಗೂ ಎಂದಿಗೂ ಇವರಿಗೆ ಸಮಸ್ಯೆಯನ್ನೇ ಉಂಟು ಮಾಡಿರಲಿಲ್ಲವಂತೆ.
ತಾನು ನಗರದಲ್ಲಿ ಇಮಿಗ್ರೇಶನ್ ಏಜೆನ್ಸಿ ಒಂದನ್ನು ನಡೆಸುತ್ತಿರುವುದಾಗಿ ಹೇಳಿದ್ದ. ಈತ ಒಂದು ವಾರ ಮನೆಯಲ್ಲಿ ಇರುತ್ತಿದ್ದರೆ, ಎರಡರಿಂದ ಮೂರು ತಿಂಗಳ ಕಾಲ ಕೆಲಸಕ್ಕಾಗಿ ತಿರುಗಾಡುತ್ತಿದ್ದ ಎಂದು ಈತನಿಗೆ ಆಶ್ರಯ ನೀಡಿದ್ದ 75ರ ಹರೆಯ ಮಹಿಳೆ ಕೃಪಲಾನಿ ಹೇಳುತ್ತಾರೆ.
ಹೆಡ್ಲಿಗೂ ಮುಂಬೈ ಸ್ಫೋಟಕ್ಕೂ ಸಂಬಂಧವಿದೆಯೇ? ಈ ಮಧ್ಯೆ, ಹೆಡ್ಲಿಗೂ ಕಳೆದ ನವೆಂಬರ್‌ನಲ್ಲಿ ಮುಂಬೈ ಮೇಲೆ ನಡೆಸಲಾಗಿರುವ ದಾಳಿಗೂ ಸಂಬಂಧವಿದೆಯೇ ಎಂಬುದಾಗಿ ತನಿಖೆ ನಡೆಸಲಾಗುತ್ತಿದೆ. ಮುಂಬೈ ದಾಳಿಯ ವೇಳೆ ಕಸಬ್ ಹಾಗೂ ಇತರ ಒಂಬತ್ತು ನರಹಂತಕರಿಗೆ ಅವರ ದಾಳಿಯ ಗುರಿಗಳ ಕುರಿತು ಪರಿಚಯಿಸಲು ಬಳಸಲಾಗಿರುವ ವೀಡಿಯೋ ದೃಶ್ಯಗಳನ್ನು ಹೆಡ್ಲಿ ಒದಗಿಸಿದ್ದಾನೆಯೇ ಎಂಬ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ.
ಈತನಿಗೂ ದೆಹಲಿ, ಅಹಮದಾಬಾದ್ ಹಾಗೂ ಬೆಂಗಳೂರು ಸರಣಿ ಸ್ಫೋಟಗಳಿಗೂ ಸಂಬಂಧವಿಲ್ಲ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.
2005ರಿಂದ 2008ರ ತನಕದ ಸ್ಫೋಟಗಳ ಅಧ್ಯಯನ ನಡೆಸಿ ಇವುಗಳನ್ನು ಹೆಡ್ಲಿ ಹಾಗೂ ಆತನ ಸಹಚರ ರಾಣಾ ಅವರುಗಳು ರಾಷ್ಟ್ರಾದ್ಯಂತ ಚಲಿಸಿರುವ ಕುರಿತು ತುಲನೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.