ತಮ್ಮ ಉತ್ತರಾಧಿಕಾರಿಯ ಆಯ್ಕೆಯ ಕುರಿತು ಒಮ್ಮತ ಮೂಡಿದಲ್ಲಿ ಅವಧಿಗೆ ಮುಂಚಿತವಾಗೇ ಸ್ಥಾನ ತ್ಯಜಿಸಲು ತನಗೇನೂ ಅಡ್ಡಿಯಿಲ್ಲ ಎಂಬುದಾಗಿ ಬಿಜೆಪಿ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ.
ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ನಿತಿನ್ ಗಾಡ್ಕರಿ ಅವರನ್ನು ಬಿಜೆಪಿ ಆಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮಾತುಗಳು ಕೇಳಿ ಬರುತ್ತಿರುವ ನಡುವೆಯೇ, ಸಿಂಗ್ ಅವರ ಈ ಹೇಳಿಕೆ ಹೊರಬಿದ್ದಿದೆ. ಬಿಜೆಪಿ ಅಧ್ಯಕ್ಷರ ಅವಧಿಯು ಡಿಸೆಂಬರ್ 31ಕ್ಕೆ ಮುಗಿಯುತ್ತದೆ. ತನ್ನ ಅವಧಿಯು ಅಕ್ಷರಶಃ ಮುಗಿಯುತ್ತಾ ಬಂದಿದ್ದು, ಉತ್ತರಾಧಿಕಾರದ ಕುರಿತು ಶೀಘ್ರ ನಿರ್ಣಯ ಕೈಗೊಳ್ಳವ ಒಲವು ಹೊಂದಿರುವುದಾಗಿ ಹೇಳಿದ್ದಾರೆ.
ಅಧ್ಯಕ್ಷ ಸ್ಥಾನ ತೊರೆಯಲು ಯಾವುದೇ ಗಡುವು ವಿಧಿಸಲಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು "ತಾನಿನ್ನೂ ದಿನಾಂಕ ನಿಗದಿ ಮಾಡಿಲ್ಲ" ಎಂದು ನುಡಿದರು. ಈ ಕುರಿತು ಪಕ್ಷವು ಕೈಗೊಳ್ಳುವ ಯಾವುದೇ ತೀರ್ಮಾನಕ್ಕೆ ತಾನು ಬದ್ಧವಾಗಿರುವುದಾಗಿ ಅವರು ಹೇಳಿದ್ದಾರೆ.