ಏರ್ ಇಂಡಿಯಾ ಗಗನ ಸಖಿ ಕೋಮಲ್ ಸಿಂಗ್ ಮೇಲೆ ವಿಮಾನ ಪ್ರಯಾಣದ ವೇಳೆ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂಬುದಾಗಿ ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ.
ತನ್ನ ಮೇಲೆ ಪೈಲಟ್ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಕೋಮಲ್ ಸಿಂಗ್ ನೀಡಿರುವ ದೂರಿನ ಆಧಾರದಲ್ಲಿ, ಪ್ರಕರಣದ ಕುರಿತು ತನಿಖೆ ನಡೆಸಲು ಆಯೋಗವು ಸದಸ್ಯೆ ವಾನ್ಸುಕ್ ಸಿಯೇಮ್ ನೇತೃತ್ವದ ಐವರು ಸದಸ್ಯತ್ವದ ಸಮಿತಿಯನ್ನು ನೇಮಿಸಿತ್ತು. ಈ ಸಮಿತಿಯು ಮಂಗಳವಾರ ಮಹಿಳಾ ಮತ್ತು ಮಕ್ಕಳ ಸಚಿವಾಲಯಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ.
ಕೋಮಲ್ ಸಿಂಗ್‌ಗೆ ನ್ಯಾಯ ಒದಗಿಸುವುದಾಗಿ ಈ ಹಿಂದೆ ಹೇಳಿದ್ದ ಮಹಿಳಾ ಆಯೋಗದ ಅಧ್ಯಕ್ಷೆ ಗಿರಿಜಾ ವ್ಯಾಸ್, ಇನ್ನಷ್ಟು ಸಾಕ್ಷ್ಯಗಳ ಪರಿಶೀಲನೆಯ ಬಳಿಕ ವರದಿ ಒಪ್ಪಿಸುವುದಾಗಿ ಹೇಳಿದ್ದರು. ಇದಲ್ಲದೆ, ಗಗನ ಸಖಿಯರ ಪ್ರತಿಷ್ಠೆ, ಭದ್ರತೆ ಹಾಗೂ ಸುರಕ್ಷತೆಗಾಗಿ ನಿಯಮಗಳನ್ನು ಸಿದ್ಧಪಡಿಸಿ ಇದನ್ನು ಎಲ್ಲಾ ವಾಯುಯಾನ ಸಂಸ್ಥೆಗಳಿಗೆ ಸಲ್ಲಿಸುವುದಾಗಿಯೂ ಅವರು ಹೇಳಿದ್ದರು.
ಕೋಮಲ್ ಸಿಂಗ್, ಆಯೋಗಕ್ಕೆ ಅಕ್ಟೋಬರ್ 5ರಂದು ಮೊದಲಿಗೆ ಇಮೇಲ್ ಮೂಲಕ ದೂರು ಸಲ್ಲಿಸಿದ್ದರು. ಬಳಿಕ ಲಿಖಿತ ದೂರನ್ನು ಸಲ್ಲಿಸಿದ್ದರು.
ಅಕ್ಟೋಬರ್ 3ರಂದು ಶಾರ್ಜಾ ನವದೆಹಲಿ ನಡುವೆ ಹಾರುತ್ತಿದ್ದ ಐಸಿ 884 ವಿಮಾನದಲ್ಲಿ ಕ್ಯಾಫ್ಟನ್‌ಗಳು ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ದೂರಲಾಗಿತ್ತು. ಕೋಮಲ್ ಸಿಂಗ್, ಆಕೆಯ ಸ್ನೇಹಿತ ಹಾಗೂ ಪೈಲಟ್‌ಗಳ ನಡುವೆ ಹೊಯ್‌ಕೈ ನಡೆದಿದ್ದು, ಈ ಘಟನೆಯು ವಿಮಾನ ಸಿಬ್ಬಂದಿಗಳ ನಡತೆ ಹಾಗೂ ಸುರಕ್ಷತೆಯ ಪ್ರಶ್ನೆ ಎತ್ತಿತ್ತು. ಈ ಘಟನೆ ನಡೆದ ದಿನದಂದು ವಿಮಾನದಲ್ಲಿ 106 ಪ್ರಯಾಣಿಕರಿದ್ದರು.