ಹೆಡ್ಲಿ ಪ್ರಕರಣದಲ್ಲಿ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಪುತ್ರ ರಾಹುಲ್ ಭಟ್ ಪ್ರತ್ಯಕ್ಷದರ್ಶಿಯೇ ಹೊರತು ಶಂಕಿತನಲ್ಲ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ಶಂಕಿತ ಉಗ್ರರಿಬ್ಬರಾದ ಡೇವಿಡ್ ಹೆಡ್ಲಿ ಹಾಗೂ ಅತನ ಸಹಚರ ತಹವೂರ್ ಹುಸೇನ್ ರಾಣಾ ಅವರ ಕುರಿತು ಮಾಧ್ಯಮ ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ರಾಹುಲ್ ಸ್ವಯಂ ಆಗಿ ನಗರ ಪೊಲೀಸರನ್ನು ಭೇಟಿಯಾಗಿ ಮಾಹಿತಿ ನೀಡಿದ್ದಾಗಿ ವರದಿಗಳು ಹೇಳಿವೆ. ಹೆಡ್ಲಿಗೆ ಮನೆಯ ಅವಶ್ಯಕತೆ ಇದ್ದು, ಆತನಿಗೆ ಮುಂಬೈಯಲ್ಲಿ ಫ್ಲಾಟ್ ಒದಗಿಸಲು ತಾನು ಸಹಾಯ ಮಾಡಿರುವುದಾಗಿ ರಾಹುಲ್ ಸ್ವಯಂ ಮಾಹಿತಿ ನೀಡಿದ್ದರು.
ರಾಹುಲ್ ಭಟ್ ಸೇರಿದಂತೆ ಯಾರಿಗೇ ಆದರೂ ಈ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡುವ ಪ್ರಶ್ನೆಯೇ ಇಲ್ಲ ಎಂಬುದಾಗಿ ಗೃಹಕಾರ್ಯದರ್ಶಿ ಜಿ.ಕೆ. ಪಿಳ್ಳೈ ಭಾನುವಾರ ಹೇಳಿದ್ದರು. ಮುಂಬೈ ಬಿಟ್ಟು ತೆರಳದಂತೆ ರಾಹುಲ್‌ಗೆ ಪೊಲೀಸರು ತಾಕೀತು ಮಾಡಿದ್ದಾರೆ ಎಂಬುದಾಗಿ ಸೋಮವಾರದ ವರದಿಗಳು ಹೇಳಿದ್ದವು. ಅದಾಗ್ಯೂ, ಈ ವರದಿಗಳನ್ನು ಮಹೇಶ್ ಭಟ್ ತಳ್ಳಿಹಾಕಿದ್ದರು.