ಜನತೆ ಹಂದಿಜ್ವರದ ಭಯದಿಂದ ಹೊರಬಂದತೆ ಕಾಣುತ್ತಿದ್ದರೂ, ಇದಕ್ಕೆ ಬಲಿಯಾಗುವವರ ಸಂಖ್ಯೆ ದಿನೇದಿನೇ ಏರುತ್ತಲೇ ಹೋಗುತ್ತಿದೆ. ಮಂಗಳವಾರ ಈ ಮಹಾಮಾರಿಗೆ ರಾಷ್ಟ್ರದಲ್ಲಿ ನಾಲ್ಕು ಮಂದಿ ಬಲಿಯಾಗಿದ್ದು, ಒಟ್ಟು ಸಂಖ್ಯೆ 530ಕ್ಕೇರಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಗೋವಾ, ಉತ್ತರಖಂಡ ಹಾಗೂ ಗುಜರಾತ್‌ಗಳಲ್ಲಿ ತಲಾ ಒಂದೊಂದು ಸಾವು ಸಂಭವಿಸಿದೆ. ಕರ್ನಾಟಕದಲ್ಲಿ ಒಟ್ಟು ಸಾವಿನ ಸಂಖ್ಯೆ 119ಕ್ಕೇರಿದೆ. ಗೋವಾ ಮತ್ತು ಉತ್ತರಖಂಡದಲ್ಲಿ ಸಾವಿನ ಸಂಖ್ಯೆ 5ಕ್ಕೇರಿದ್ದರೆ, ಗುಜರಾತ್‌ನಲ್ಲಿ ಈ ರೋಗಕ್ಕೆ ಬಲಿಯಾದವರ ಸಂಖ್ಯೆ 45. ರಾಷ್ಟ್ರದಲ್ಲಿ ಮೊದಲ ಹಂದಿಜ್ವರ ಪ್ರಕರಣ ಪತ್ತೆಯಾದ ಮಹಾರಾಷ್ಟದಲ್ಲಿ ಈ ರೋಗಕ್ಕೆ ಗರಿಷ್ಠ ಮಂದಿ ಬಲಿಯಾಗಿದ್ದು, ಸತ್ತವರ ಸಂಖ್ಯೆ 214ಕ್ಕೇರಿದೆ.
ಇದೇ ವೇಳೆ ರಾಷ್ಟ್ರದಲ್ಲಿ 176 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ಈ ಸೋಂಕು ರೋಗ ತಗುಲಿದವರ ಒಟ್ಟು ಸಂಖ್ಯೆ 15,726ಕ್ಕೇರಿದೆ.
ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ 62 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇಲ್ಲಿ ಇದುವರೆಗೆ ಒಟ್ಟು 3,837 ಮಂದಿ ಸೋಂಕು ಪೀಡಿತರಾಗಿದ್ದಾರೆ. ಮಹಾರಾಷ್ಟ್ರದಲ್ಲಿ 25 ಹೊಸ ಪ್ರಕರಣಗಳು ದಾಖಲಾಗಿವೆ. ರಾಜಸ್ಥಾನದಲ್ಲಿ 43, ಉತ್ತರ ಪ್ರದೇಶದಲ್ಲಿ 10 ತಮಿಳ್ನಾಡಿನಲ್ಲಿ 7 ಹಾಗೂ ಕರ್ನಾಟಕದಲ್ಲಿ 4 ಹೊಸ ಪ್ರಕರಣಗಳು ದಾಖಲಾಗಿವೆ.