ದೆಹಲಿಯ ಪಾಲಂ ಇಂದಿರಾಗಾಂಧಿ ವಿಮಾನ ನಿಲ್ದಾಣ ಸಮೀಪದಲ್ಲಿ ಚಲಿಸುವ ಕಾರಿನಲ್ಲೇ 12ರ ಹರೆಯದ ಬಾಲಕಿಯೊಬ್ಬಳ ಮೇಲೆ ದುರಳರಿಬ್ಬರು ಅತ್ಯಾಚಾರ ನಡೆಸಿರುವುದಾಗಿ ದೂರಲಾಗಿದೆ. ಇವರಿಬ್ಬರೂ ತನ್ನ ನೆರೆಯವರೆಂದು ಬಾಲಕಿ ದೂರಿನಲ್ಲಿ ಹೇಳಿದ್ದು, ಈ ಇಬ್ಬರನ್ನು ಬಂಧಿಸಲಾಗಿದೆ.
ಬಂಧಿತರಿಬ್ಬರು ರಿಯಲ್ ಎಸ್ಟೇಟ್ ಏಜೆಂಟ್‌ಗಳಾಗಿದ್ದು, ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆಸಿದ ಗಂಟೆಗಳೊಳಗಾಗಿ ದುಷ್ಕರ್ಮಿಗಳನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
"ಈ ಇಬ್ಬರೂ ಸಾಯಂಕಾಲ ಸುಮಾರು ಐದೂ ಮುಕ್ಕಾಲು ಗಂಟೆಯ ವೇಳೆಗೆ ತಮ್ಮ ಮನೆಗೆ ಬಂದಿದ್ದು, ತನ್ನನ್ನು ಹೊರಗೆ ಕರೆದೊಯ್ಯುವುದಾಗಿ ತನ್ನ ತಾಯಿಗೆ ಹೇಳಿದರು. ಅಲ್ಲದೆ ತನಗೆ ಹೊಸಬಟ್ಟೆ ಖರೀದಿಸುವುದಾಗಿ ಹೇಳಿದರಲ್ಲದೆ, ಕಾರಿನಲ್ಲಿ ಸುತ್ತಾಡಿಸುವ ಆಮಿಷ ಒಡ್ಡಿದರು. ನನ್ನ ತಾಯಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ, ಚಿಂತಿಸದಿರುವಂತೆ ಹೇಳಿದ ಈ ಇಬ್ಬರು 'ಅಣ್ಣಂದಿರು' ತನ್ನನ್ನು ಸುರಕ್ಷಿತವಾಗಿ ಕರೆತರುವುದಾಗಿ ಭರವಸೆ ನೀಡಿದರು" ಎಂಬುದಾಗಿ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.
ಏಳನೆ ತರಗತಿಯಲ್ಲಿ ಕಲಿಯುತ್ತಿರುವ ಹುಡುಗಿಯನ್ನು ತಮ್ಮ ಆಲ್ಟೋ ಕಾರಿನಲ್ಲಿ ಕೂರಿಸಿಕೊಂಡ ಅವರು ಮೊದಲಿಗೆ ದ್ವಾರ್ಕಾ-ಪಾಲಂ ಫ್ಲೈ ಓವರ್‌ಗೆ ಕರೆದೊಯ್ದಿದ್ದು, ಬಳಿಕ ಏರ್‌ಪೋರ್ಟಿನತ್ತ ಚಲಿಸಿದರು. ಕಾರಿಗೆ ಕಪ್ಪು ಗ್ಲಾಸ್ ಹಾಕಿದ್ದ ಕಾರಣ ತನಗೆ ಏನೂ ಕಾಣುತ್ತಿರಲಿಲ್ಲ ಎಂದು ಆಕೆ ದೂರಿದ್ದಾಳೆ.
ಕಾರಿನಲ್ಲೇ ತನ್ನ ಮೇಲೆ ಅತ್ಯಾಚಾರ ಎಸಗಿದ ಇಬ್ಬರು ರಾತ್ರಿ ಸುಮಾರು ಎಂಟು ಗಂಟೆಯ ವೇಳೆಗೆ ಬಾಲಕಿಯನ್ನು ಮನೆಯ ಸಮೀಪ ಬಿಟ್ಟಿದ್ದು, ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದಲ್ಲಿ ಪರಿಸ್ಥಿತಿ ನೆಟ್ಟಗಿರಲಾರದು ಎಂಬುದಾಗಿ ಬೆದರಿಕೆ ಹಾಕಿದರೆಂದು ದೂರಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಳಿಕ ತನ್ನ ಹೆತ್ತವರಿಗೆ ಬಾಲಕಿ ಘಟನೆಯನ್ನು ತಿಳಿಸಿದ್ದು, ಅವರು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.