ಇಲ್ಲಿನ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಸಂಭವಿಸಿರುವ ಅನಿಲ ಸೋರಿಕೆಯಿಂದಾಗಿ ಕನಿಷ್ಠ 67 ಸಿಬ್ಬಂದಿಗಳನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ವರದಿಯಾಗಿದೆ. ದಕ್ಷಿಣ ಕೊರಿಯಾ ಮೂಲದ ಸಾಮ್ಸಂಗ್ ಕಂಪೆನಿಯ ವಾಶಿಂಗ್ ಮಶಿನ್ ಘಟಕದಲ್ಲಿ ಮಂಗಳವಾರ ಸಾಯಂಕಾಲ ಈ ದುರ್ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಅದಾಗ್ಯೂ, ಅನಿಲ ಸೋರಿಕೆಯನ್ನು ನಿರಾಕರಿಸಿರುವ ಕಂಪೆನಿಯ ವಕ್ತಾರರೊಬ್ಬರು, ಈ ಘಟಕದಲ್ಲಿ ಯಾವುದೇ ಪ್ರಕ್ರಿಯೆಗೂ ಅನಿಲ ಬಳಸಲಾಗುತ್ತಿಲ್ಲ ಎಂದು ಹೇಳಿದ್ದಾರೆ.
ಉಸಿರುಗಟ್ಟುವಿಕೆ, ತಲೆನೋವು ಹಾಗೂ ಹೊಟ್ಟೆ ತೊಳಸುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದ ಸುಮಾರು 67 ಮಂದಿ ತಮ್ಮ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ಕೈಲಾಸ್ ಆಸ್ಪತ್ರೆಯ ಅಧ್ಯಕ್ಷ ಮಹಶ್ ಶರ್ಮಾ ಹೇಳಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವವರಲ್ಲಿ ಹೆಚ್ಚಿನವರು ಬಿಡುಗಡೆಗೊಂಡಿದ್ದು ಇವರಲ್ಲಿ ಎಂಟು ಮಂದಿಯನ್ನು ಅಬ್ಸರ್ವೇಶನ್‌ನಲ್ಲಿ ಇರಿಸಲಾಗಿದೆ. ಇವರಲ್ಲಿ ಆರು ಮಂದಿಯನ್ನು ತುರ್ತುನಿಗಾ ಘಟಕದಲ್ಲಿ ಇರಿಸಲಾಗಿದೆ.
ಕಚೇರಿಯ ಪಕ್ಕದಲ್ಲಿ ಹಾದುಹೋಗುವ ವಾಹನಗಳಿಂದಲೂ ಅನಿಲ ಸೋರಿಕೆಯಾಗಿರುವ ಸಂಭವ ಇದೆ ಎಂಬುದಾಗಿ ಕಂಪೆನಿಯ ಆಡಳಿತ ಶಂಕಿಸಿದೆ ಎಂದು ವಕ್ತಾರರು ತಿಳಿಸಿದ್ದಾರೆ.