ಕೆಲವು ದಿನಗಳ ಹಿಂದೆ ತನಗೆ ಪೂರೈಸಲಾಗಿದ್ದ ಆಹಾರದಲ್ಲಿ ಅಮಲು ಬರಿಸುವ ಪದಾರ್ಥವನ್ನು ಮಿಶ್ರಮಾಡಲಾಗಿತ್ತು ಎಂಬುದಾಗಿ, ಮುಂಬೈ ದಾಳಿಯ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯದಲ್ಲಿ ವಿಶೇಷ ನ್ಯಾಯಾಧೀಶ ಎಂ.ಎಲ್. ತಹಲಿಯಾನಿ ಮುಂದೆ ನರಹಂತಕ ಉಗ್ರ ಅಜ್ಮಲ್ ಅಮೀರ್ ಕಸಬ್ ನಿವೇದಿಸಿಕೊಂಡಿದ್ದಾನೆ. ಅಲ್ಲದೆ, ತನಗೆ ನೀಡಲಾಗಿದ್ದ ಅನ್ನದ ಮಾದರಿಯನ್ನು ಕಾಗದಲ್ಲಿ ಸುತ್ತಿ ತಂದು ತನ್ನ ಆಪಾದನೆಗೆ ಆಧಾರವೆಂಬಂತೆ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಎದುರು ಹಾಜರಿಪಡಿಸಿದ್ದಾನೆ ಎಂಬುದಾಗಿ ಸರ್ಕಾರಿ ವಕೀಲರಾಗಿರುವ ಉಜ್ವಲ್ ನಿಕಂ ಹೇಳಿದ್ದಾರೆ.
ಕಸಬ್ ದೂರಿನ ಹಿನ್ನೆಲೆಯಲ್ಲಿ ನ್ಯಾಯಾಲಯವು ಕಸಬ್ ನ್ಯಾಯಾಲಯದಲ್ಲಿ ಹಾಜರು ಪಡಿಸಿರುವ ಅನ್ನದ ಮಾದರಿಯನ್ನು ವೈದ್ಯಕೀಯ ತಜ್ಞರಿಗೆ ಕಳುಹಿಸಿದ್ದಾರೆ. "ಆದರೆ ಅನ್ನದ ಮಾದರಿಯು ಯಾವುದೇ ಅಮಲು ಬರಿಸುವ ಅಂಶವನ್ನು ಹೊಂದಿರಲಿಲ್ಲ ಎಂಬ ಅಭಿಪ್ರಾಯ ಸೂಚಿಸಿದ್ದಾರೆ" ಎಂದು ನಿಕಂ ಹೇಳಿದ್ದಾರೆ. ಅವರು ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಿದ್ದರು.
ಆರೋಪಿ ತನ್ನ ಬೇಗುದಿಯನ್ನು ನ್ಯಾಯಾಲಯದ ಮುಂದೆ ತೋಡಿಕೊಂಡಿದ್ದಾನೆ ಎಂಬುದಾಗಿ ಕಸಬ್‌ನನ್ನು ಪ್ರತಿನಿಧಿಸುತ್ತಿರುವ ಅಬ್ಬಾಸ್ ಖಾಜ್ಮಿ ಹೇಳಿದ್ದರೆ, ಸರ್ಕಾರಿ ವಕೀಲರಾಗಿರುವ ನಿಕಮ್ "ಕಸಬ್ ಒಬ್ಬ ದೊಡ್ಡ ಸುಳ್ಳನಾಗಿದ್ದಾನೆ ಮತ್ತು ಆತ ವಿಚಾರಣೆಯ ಹಳಿತಪ್ಪಿಸಲು ಇಂತಹ ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿದ್ದಾನೆ" ಎಂದು ಪ್ರತಿಕ್ರಿಯಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಕಸಬ್ ಕಟಕಟೆಯಲ್ಲಿ ತಲೆಕೆಳಗೆ ಹಾಕಿ ಕುಳಿತುಕೊಳ್ಳುತ್ತಿದ್ದು, ಅತನ ತುಟಿಯಲ್ಲಿ ಸುಳಿಯುತ್ತಿದ್ದ ಎಂದಿನ ನಗುವೀಗ ಮಾಯವಾಗಿದೆ.
"ವಿಚಾರಣೆಯು ಅಂತಿಮ ಹಂತವನ್ನು ತಲುಪಿದ್ದು, ಆತನ ವಿರುದ್ಧ ಬಲವಾದ ಪುರಾವೆಗಳಿರುವುದನ್ನು ಕಸಬ್ ತಿಳಿದಿದ್ದಾನೆ. ಹಾಗಾಗಿ ಆತನೀಗ ಇಂತಹ ಆಪಾದನೆಗಳನ್ನು ಜನರ ಅನುಕಂಪಗಳಿಸಲು ಮಾಡುತ್ತಿದ್ದಾನೆ. ಇದೆಲ್ಲ ನಾಟಕ, ಮತ್ತು ಅವನೊಬ್ಬ ಒಳ್ಳೆಯ ನಟ. ಆತನಿಗೆ ಶಸ್ತ್ರಾಸ್ತ್ರ ಬಳಕೆಯ ತರಬೇತಿ ಮಾತ್ರವಲ್ಲ, ಸಿಕ್ಕಿಬಿದ್ದಲ್ಲಿ ತನಿಖೆಯ ಹಾದಿಯನ್ನು ಹೇಗೆ ತಪ್ಪಿಸಬೇಕು ಎಂಬ ಕುರಿತೂ ಸೂಕ್ತ ತರಬೇತಿ ನೀಡಲಾಗಿದೆ" ಎಂದು ನಿಕಂ ದೂರಿದ್ದಾರೆ.
ತನಗೆ ನೀಡಲಾಗುತ್ತಿರುವ ಆಹಾರ ಕಳಪೆಮಟ್ಟದ್ದಾಗಿದ್ದು, ತನಗೆ ಬಿರಿಯಾಣಿ ಬೇಕು ಎಂಬುದಾಗಿ ಕಸಬ್ ನ್ಯಾಯಾಲಯದಲ್ಲಿ ಹೇಳಿದ್ದ. ಆದರೆ ಜೈಲಿನಲ್ಲಿ ಏನು ಆಹಾರ ನೀಡಲಾಗುತ್ತಿದೆಯೋ ಅದನ್ನೇ ತಿನ್ನಬೇಕು ಎಂದು ನ್ಯಾಯಾಲಯ ತಾಕೀತು ಮಾಡಿತ್ತು.