ಖ್ಯಾತ ತೆಲುಗು ಚಿತ್ರನಟ, ಪ್ರಜಾರಾಜ್ಯಂ ಪಕ್ಷದ ಸ್ಥಾಪಕ ಚಿರಂಜೀವಿ ವಿದ್ಯುದಾಘಾತದಿಂದ ಕೂದಲೆಳೆಯ ಅಂತರದಿಂದ ಪಾರಾದ ಘಟನೆ ಮಂಗಳವಾರ ನಡೆದಿದೆ.
ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೋರೇಶನ್ ಚುನಾವಣೆ ಹಿನ್ನೆಲೆಯಲ್ಲಿ ಪ್ರಜಾರಾಜ್ಯಂ ಸಂಸ್ಥಾಪಕ ಚಿರಂಜೀವಿ ಪ್ರಚಾರ ನಡೆಸುತ್ತಿದ್ದರು. ಇಕ್ಕಟ್ಟಾಗಿರುವ ಗೌತಮ್ ನಗರದ ರಸ್ತೆಗಳಲ್ಲಿ ಸಾಗುತ್ತಿದ್ದ ವೇಳೆ ಜೋತು ಬಿದ್ದಿದ್ದ ವಿದ್ಯುತ್ ತಂತಿಗಳು ಚಿರು ಅವರನ್ನ ಸ್ಪರ್ಶಿಸುವ ಸಾಧ್ಯತೆ ಇತ್ತು.
ರಕ್ಷಣಾ ಸಿಬ್ಬಂದಿ ಅವುಗಳನ್ನು ಬಿದಿರಿನ ಕೋಲುಗಳಿಂದ ಚಿರು ಅವರಿಗೆ ತಾಗದಂತೆ ಮೇಲಕ್ಕೆತ್ತಿದರು. ಈ ಸಂದರ್ಭದಲ್ಲಿ ತಂತಿಗಳು ಪರಸ್ಪರ ಸ್ಪರ್ಶಿಸಿದ್ದರಿಂದ ಕಿಡಿಗಳು ಎದ್ದವು. ಅವುಗಳಿಂದ ಪಾರಾಗಲು ಕತ್ತನ್ನು ಬಾಗಿಸುವ ಮೂಲಕ ಅವರು ಕೂದಲೆಳೆಯ ಅಂತರದಿಂದ ಅಪಾಯದಿಂದ ಪಾರಾದರು.