ಸಂಸತ್‌ನ ಚಳಿಗಾಲದ ಅಧಿವೇಶನ ಗುರುವಾರ ಬೆಳಿಗ್ಗೆ ಆರಂಭಗೊಳ್ಳಲಿದ್ದು, ಕರ್ನಾಟಕ ಹಾಗೂ ನೆರೆಯ ಆಂಧ್ರಪ್ರದೇಶದಲ್ಲಿ ಸಾಕಷ್ಟು ವಿವಾದ ಹುಟ್ಟು ಹಾಕಿರುವ ಅಕ್ರಮ ಗಣಿಗಾರಿಕೆ ವಿಷಯ ಕೂಡ ಇಂದಿನ ಕಲಾಪದಲ್ಲಿ ಚರ್ಚೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಅಕ್ರಮ ಗಣಿ ವಿರುದ್ಧ ಧ್ವನಿ ಎತ್ತುವುದಾಗಿ ಟಿಡಿಪಿ ಹಾಗೂ ಸಿಪಿಐಎಂ, ಜೆಡಿಎಸ್ ಕೂಡ ತಿಳಿಸಿದೆ.
ಪ್ರಮುಖವಾಗಿ ಕರ್ನಾಟಕ ಸೇರಿದಂತೆ ದೇಶದ ಕೆಲವೆಡೆ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಕುರಿತು ಲೋಕಸಭೆಯಲ್ಲಿ ಧ್ವನಿ ಎತ್ತುವುದಾಗಿ ಬುಧವಾರ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿದ್ದ ಸಿಪಿಐಎಂನ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ವಿವರಣೆ ನೀಡಿದ್ದರು.
ಅಲ್ಲದೇ ಕರ್ನಾಟಕದ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪೆನಿ ವಿರುದ್ಧ ಸಮರ ಸಾರಿರುವ ಟಿಡಿಪಿ, ಅಕ್ರಮ ಗಣಿಗಾರಿಕೆ ವಿಚಾರನ್ನು ಅಧಿವೇಶನದಲ್ಲಿ ಗಂಭೀರವಾಗಿ ಪ್ರಸ್ತಾಪಿಸುವುದಾಗಿ ಈಗಾಗಲೇ ಹೇಳಿದೆ. ಐತಿಹಾಸಿಕ ಎನಿಸಿರುವ ಮಹಿಳಾ ಮಸೂದೆಗೂ ಕೂಡ ಅಂಕಿತ ಬೀಳುವ ಸಾಧ್ಯತೆ ಇದೆ.
ತಿಂಗಳ ಕಾಲ ನಡೆಯಲಿರುವ ಈ ಅಧಿವೇಶನದಲ್ಲಿ ಬೆಲೆ ಏರಿಕೆ, ಮಧು ಕೋಡಾ ಮೇಲಿನ ಹವಾಲಾ ಹಗರಣ, ಸ್ಪೆಕ್ಟ್ರಂ ಹಂಚಿಕೆ ವಿವಾದ ಸೇರಿದಂತೆ ಹಲವು ವಿಚಾರಗಳ ವಿರುದ್ಧ ಪ್ರತಿಪಕ್ಷಗಳು ಯುಪಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿವೆ.