ತಿರುವನಂತಪುರಂ, ಗುರುವಾರ, 19 ನವೆಂಬರ್ 2009( 10:53 IST )
PTI
ತನ್ನ ಹೇಳಿಕೆಗಳಿಂದ ವಿವಾದಗಳನ್ನು ತಲೆಮೇಲೆ ಎಳೆದುಕೊಳ್ಳುವಲ್ಲಿ ಖ್ಯಾತರಾಗಿರುವ ಟ್ವಿಟರ್ ಪ್ರೇಮಿ ಶಶಿ ತರೂರ್ ಅವರು, ವಂದೇಮಾತರಂ ಕಡ್ಡಾಯವಾಗಬಾರದು, ಇದನ್ನು ಜನರ ಆಯ್ಕೆಗೆ ಬಿಡಬೇಕು ಎಂದು ಹೇಳಿದ್ದಾರೆ.
"ವಂದೇ ಮಾತರಂ ವಿರುದ್ಧ ರಾಷ್ಟ್ರದ ಉತ್ತರದಲ್ಲಿ ವಿವಾದವೆದ್ದಿದೆ. ರಾಷ್ಟ್ರಗೀತೆ ಹಾಗೂ ರಾಷ್ಟ್ರಧ್ವಜ ನಮ್ಮ ಸಂವಿಧಾನದಲ್ಲಿ ಉನ್ನತಸ್ಥಾನ ಹೊಂದಿದೆ. ಇವುಗಳನ್ನು ರಕ್ಷಿಸಲು ಕಾನೂನುಗಳಿವೆ. ಈ ರಾಷ್ಟ್ರಗೀತೆಯು ರಾಷ್ಟ್ರೀಯ ಕ್ರೀಡೆಯಂತೆ ಐಚ್ಛಿಕ. ತಾಯ್ನಾಡಿನ ಮೇಲಿನ ಪ್ರೀತಿಯೊಂದಿಗೆ ಇದನ್ನು ಹಾಡಿ. ನಿಮಗೆ ಇಷ್ಟವಿಲ್ಲದಿದ್ದರೆ ಇದನ್ನು ಹಾಡಬೇಡಿ. ನಿಮ್ಮನ್ನು ಯಾರೂ ಒತ್ತಾಯಿಸುವುದಿಲ್ಲ" ಎಂಬುದಾಗಿ ವಿದೇಶಾಂಗ ಇಲಾಖಾ ರಾಜ್ಯ ಸಚಿವರು ಹೇಳಿದ್ದಾರೆ. ಅವರು ಇಲ್ಲಿನ ಸಿಎಸ್ಐ ಕ್ರಿಸ್ಟ್ ಚರ್ಚ್‌ನಲ್ಲಿ ಕಳೆದ ಭಾನುವಾರ ಮಾತನಾಡುತ್ತಿದ್ದರು. ಚರ್ಚಿನ 150 ವರ್ಷದ ಆಚರಣೆಯ ವೇಳೆ ಅವರು ಮಾತನಾಡುತ್ತಿದ್ದರು.
ಜಮಾತೆ ಈ ಉಲೇಮಾ ಹಿಂದ್ ವಂದೇ ಮಾತರಂ ವಿರುದ್ಧ ಫತ್ವಾ ಹೊರಡಿಸಿರುವ ಹಿನ್ನೆಲೆಯಲ್ಲಿ ತರೂರ್ ಅವರ ಈ ಹೇಳಿಕೆ ಪ್ರಾಮುಖ್ಯತೆ ಪಡೆದಿದೆ.
ಮುಸ್ಲಿಮರ ಪ್ರಕಾರ, ಬಂಕಿಮಚಂದ್ರ ಚಟ್ಟೋಪಾಧ್ಯಾಯ ನಿರ್ಮಿತ ಈ ರಾಷ್ಟ್ರೀಯ ಹಾಡಿನಲ್ಲಿರುವ ಕೆಲವು ಸಾಲುಗಳು ಇಸ್ಲಾಮ್ ವಿರೋಧಿ ಎಂಬುದಾಗಿ ಕೆಲವು ಮುಸ್ಲಿಂ ಧಾರ್ಮಿಕ ಗುರುಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.