ಹೊಸ ಮಾಹಿತಿ ಆಯುಕ್ತರ ಆಯ್ಕೆಯನ್ನು ಅಂತಿಮಗೊಳಿಸಲು ಪ್ರಧಾನಿ ಮನಮೋಹನ್ ಸಿಂಗ್ ಅವರು ಶುಕ್ರವಾರ ವಿಪಕ್ಷ ನಾಯಕ ಎಲ್.ಕೆ. ಆಡ್ವಾಣಿ ಹಾಗೂ ಕಾನೂನು ಸಚಿವ ವೀರಪ್ಪ ಮೊಯ್ಲಿ ಅವರನ್ನು ಭೇಟಿಯಾಗಲಿದ್ದಾರೆನ್ನಲಾಗಿದೆ.
ಸಿಂಗ್ ಅವರು ಶನಿವಾರ ಅಮೆರಿಕ ಭೇಟಿಗೆ ತೆರಳಲಿದ್ದು, ಇದಕ್ಕೆ ಮುನ್ನಾ ದಿನವಾದ ಶುಕ್ರವಾರ ಸಾಯಂಕಾಲ ಈ ಭೇಟಿ ನಡೆಸುವ ಸಾಧ್ಯತೆ ಇದೆ.
ಸಿಐಸಿ ವಜಹತ್ ಹಬಿಬುಲ್ಲಾ ಅವರು ರಾಜೀನಾಮೆ ನೀಡಿದ ಒಂದು ತಿಂಗಳ ಬಳಿಕ ಈ ಸಭೆ ನಡೆಯುತ್ತಿದೆ. ಆರ್‌ಟಿಐ ಕಾರ್ಯಕರ್ತರು ಈ ಸ್ಥಾನಕ್ಕೆ ಹೊಸಬರನ್ನು ನೇಮಿಸಬೇಕು ಹಾಗೂ ನೇಮಕದಲ್ಲಿ ಪಾರದರ್ಶಕತೆ ಇರಬೇಕು ಎಂಬುದಾಗಿ ಒತ್ತಾಯಿಸಿದ್ದಾರೆ.
ಈ ಸ್ಥಾನಕ್ಕೆ ಅಭ್ಯರ್ಥಿಗಳ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲದೇ ಇದ್ದರೂ, ನಾಗರಿಕ ವಾಯುಯಾನ ಕಾರ್ಯದರ್ಶಿ ಮಾಧವನ್ ನಂಬಿಯಾರ್, ಪರಿಸರವಾದಿ ಶೇಖರ್ ಸಿಂಗ್ ಹಾಗೂ ಮಾಹಿತಿ ಆಯುಕ್ತ ಎ.ಎನ್. ತಿವಾರಿ ಅವರ ಹೆಸರುಗಳು ಕೇಳಿಬರುತ್ತಿವೆ.