ಗೋವಾದಲ್ಲಿ ನವೆಂಬರ್ 23ರಿಂದ ನಡೆಯಲಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮಂಗಳೂರು ಮೂಲದ ಉಗ್ರರ ಬೆದರಿಕೆ ಬಂದಿರುವ ವರದಿಯಾಗಿದೆ. ಆದರೆ, ಗೋವಾ ಪೊಲೀಸರು ಇದನ್ನು ಅಲ್ಲಗಳೆದಿದ್ದಾರೆ.
14ದಿನಗಳ ಕಾಲ ನಡೆಯಲಿರುವ ಚಿತ್ರೋತ್ಸವಕ್ಕೆ ಲಷ್ಕರ್ ಎ ತೊಯ್ಬಾದ ಅಧೀನದಲ್ಲಿ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಉಗ್ರ ಸಂಘಟನೆಗಳಿಂದ ಬೆದರಿಕೆ ಬಂದಿದೆ ಎಂದು ಟಿವಿ ಚಾನೆಲ್‌ಗಳು ಗುರುವಾರ ವರದಿ ಮಾಡಿದ್ದವು. ಆದರೆ ಇದನ್ನು ನಿರಾಕರಿಸಿದ ಗೋವಾ ಪೊಲೀಸ್ ವರಿಷ್ಠಾಧಿಕಾರಿ ಆತ್ಮರಾಮ್ ದೇಶಪಾಂಡೆ, ತಮಗೆ ಇದುವರೆಗೆ ಅಂತಹ ಯಾವುದೇ ಮಾಹಿತಿಗಳು ಬಂದಿಲ್ಲ. ಬೆದರಿಕೆ ಇದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ವಿವರಿಸಿರುವ ಅವರು, ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಸಾಕಷ್ಟು ಭದ್ರತೆ ನೀಡಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.