ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಭಾರತೀಯ ಜನತಾಪಕ್ಷ ತೀವ್ರ ಮುಖಭಂಗ ಅನುಭವಿಸಿರುವ ಹಿನ್ನೆಲೆಯಲ್ಲಿ ಜಾರ್ಖಂಡ್ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಆಫರ್‌ಗಳನ್ನು ನೀಡುವ ಮೂಲಕ ಮತದಾರರನ್ನು ಸೆಳೆಯುವ ತಂತ್ರಕ್ಕೆ ಮುಂದಾಗಿದೆ.
1ರೂಪಾಯಿಗೆ ಕೆ.ಜಿ. ಅಕ್ಕಿ, 25ಪೈಸೆಗೆ ಒಂದು ಕೆ.ಜಿ. ಉಪ್ಪು ನೀಡುವುದಾಗಿ ಜಾರ್ಖಂಡ್‌ನಲ್ಲಿ ನ.25ರಂದು ನಡೆಯುವ ಚುನಾವಣೆ ಅಂಗವಾಗಿ ಬಿಜೆಪಿ ಗುರುವಾರ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಈ ಭರವಸೆ ನೀಡಿದೆ.
ಬಡತನ ರೇಖೆಗಿಂತ ಕೆಳಗಿರುವವರಿಗೆ 1ರೂ.ಗೆ ಕೆ.ಜಿ. ಅಕ್ಕಿ, 25ಪೈಸೆಗೆ ಉಪ್ಪು ನೀಡಲಾಗುವುದು ಎಂದು ಮತದಾರರನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ತಂತ್ರ ರೂಪಿಸಿದೆ.
ಐದು ವರ್ಷಗಳಲ್ಲಿ ನಿರುದ್ಯೋಗ ನಿವಾರಣೆಗೆ 10ಲಕ್ಷ ಉದ್ಯೋಗ ಸೃಷ್ಟಿ, ರೈತರಿಗೆ ಶೇ.2ಬಡ್ಡಿ ದರದ ಸಾಲ, ಕೃಷಿ ಪ್ರಗತಿ ಆಯೋಗ ರಚನೆ, ನಿರಾಶ್ರಿತರಿಗೆ 3ಲಕ್ಷ ಮನೆ ನಿರ್ಮಾಣ, ಸ್ವ ಉದ್ಯೋಗಕ್ಕೆ ಶೇ.2ರ ಬಡ್ಡಿ ದರದಲ್ಲಿ ಸಾಲ, ವಯೋವೃದ್ಧರ ಪಿಂಚಣಿ ದ್ವಿಗುಣ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲಾಗುವುದು ಎಂದು ಬಿಜೆಪಿ ಜಾರ್ಖಂಡ್ ರಾಜ್ಯಾಧ್ಯಕ್ಷ ರಘುವರ್ ದಾಸ್ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ.