ನಮಗೂ ಆಯೋಗ ಬೇಕು: ಶೋಷಿತ ಗಂಡಂದಿರು
ಘಟವಾಣಿ ಹೆಂಡಿರಿಂದ ನೊಂದು ಬೆಂದಿರುವ ಗಂಡಂದಿರು
ಲಕ್ನೋ, ಶುಕ್ರವಾರ, 20 ನವೆಂಬರ್ 2009( 16:08 IST )
ಪತ್ನಿಯರಿಂದ ಪೀಡನೆಗೆ ಒಳಗಾಗಿರುವ ಶೋಷಿತ ಪತಿಯರು ಗುರುವಾರ ಇಲ್ಲಿ ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದ್ದು ಪುರುಷರಿಗಾಗಿ ರಾಷ್ಟ್ರೀಯ ಆಯೋಗವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಪೀಡಿತ ಪತಿಯರೆಲ್ಲ ಮಧುಮಗನ ವೇಷ ತೊಟ್ಟಿದ್ದರು.
ತಮ್ಮ ಘಟವಾಣಿ ಕಿರಿಕಿರಿ ಹೆಂಡತಿಯರಿಂದ ತಾವು ಶೋಷಿತರಾಗಿದ್ದೇವೆ ಎಂದು ಹೇಳಿಕೊಂಡ ಪ್ರತಿಭಟನಾಕಾರರು, ಇದಕ್ಕಾಗಿ ತಮ್ಮ ದುಃಖ ದುಮ್ಮಾನಗಳನ್ನು ಹೇಳಿಕೊಳ್ಳಲು ತಮಗೂ ಆಯೋಗ ಬೇಕು ಎಂದು ಹೇಳಿದ್ದಾರೆ.
"ಪುರುಷರಿಗಾಗಿ ರಾಷ್ಟ್ರೀಯ ಆಯೋಗದ ಸೃಷ್ಟಿಗೆ ನಾವು ಒತ್ತಾಯಿಸುತ್ತೇವೆ ಮತ್ತು ಪುರುಷರ ನೋವುಗಳನ್ನು ಆಲಿಸಲೂ ಸಹ ಯಾರಾದರೂ ಇರಬೇಕು" ಎಂಬುದಾಗಿ ಡಾ| ಸುರೇಶ್ ದುಬೆ ಹೇಳಿದ್ದಾರೆ. ಇವರೂ ಶೋಷಿತ ಪತಿಯರಲ್ಲಿ ಒಬ್ಬರಾಗಿದ್ದಾರೆ.
ಮಹಿಳಾ ಶೋಷಣೆಯಿಂದ ರಕ್ಷಣೆ ಕೊಡುವ ಭಾರತೀಯ ದಂಡ ಸಂಹಿತೆಯ 498-ಎ ಹೇಗೆ ದುರ್ಬಳಕೆ ಆಗುತ್ತದೆ ಎಂಬುದನ್ನು ಅಂಕಿಅಂಶಗಳು ಹೇಳುತ್ತವೆ ಎಂಬುದಾಗಿ ಅಖಿಲಭಾರತೀಯ ಪತಿಯರ ಸಮಿತಿಯ ಅಧ್ಯಕ್ಷ ಇಂದು ಪಾಂಡೆ ಹೇಳಿದ್ದಾರೆ.
"ರಾಷ್ಟ್ರೀಯ ಕ್ರೈಮ್ ಅಂಕಿಅಂಶಗಳನ್ನು ಗಮನಿಸಿದರೆ, ಈ ಸೆಕ್ಷನ್ ಹೇಗೆ ದುರ್ಬಳಕೆಯಾಗಿದೆ ಎಂಬುದು ಗೊತ್ತಾಗುತ್ತದೆ. ಈ ಕಾನೂನಿಗೆ ತಿದ್ದುಪಡಿ ತರಬೇಕೆಂದು ಹಲವಾರು ಬಾರಿ ಒತ್ತಾಯಿಸಲಾಗಿದೆ. ಹಾಗಾಗಿ ನಾವು ಈ ಕಾನೂನನ್ನು ವಿರೋಧಿಸುತ್ತೇವೆ" ಎಂದು ಪಾಂಡೆ ಹೇಳಿದ್ದಾರೆ.