ಗೋವನ್ನು ಪವಿತ್ರವೆಂದು ಪರಿಗಣಿಸುವ, ಬಹುಸಂಖ್ಯಾತ ಹಿಂದೂಗಳನ್ನು ಹೊಂದಿರುವ ಭಾರತವು, ಜಾಗತಿಕ ತಾಪಮಾನವನ್ನು ತಗ್ಗಿಸಲು ಗೋಮಾಂಸ ಭಕ್ಷಣೆಯನ್ನು ಕೈಬಿಡಬೇಕು ಎಂದು ವಿಶ್ವಕ್ಕೆ ಕರೆನೀಡಿದೆ.
"ಗೋಮಾಂಸ ತಿನ್ನುವುದರಿಂದ ಕಾರ್ಬನ್ ಹೊರ ಸೂಸುವುದು ಈ ವಾದಕ್ಕೆ ಪ್ರಧಾನ ಕಾರಣ" ಎಂಬುದಾಗಿ ಪರಿಸರ ಖಾತೆ ಸಚಿವ ಜೈರಾಮ್ ರಮೇಶ್ ಹೇಳಿದ್ದಾರೆ. ಅವರು ಗುರುವಾರ ತಮ್ಮ ಕಚೇರಿಯಲ್ಲಿ ವಿಶ್ವಸಂಸ್ಥೆಯ ಜನಸಂಖ್ಯಾ ವರದಿಯನ್ನು ಬಿಡುಗಡೆ ಮಾಡಿ ಮಾತನಾಡುತ್ತಾ ಈ ಒತ್ತಾಯವನ್ನು ಮಂಡಿಸಿದ್ದಾರೆ.
"ಗೋಮಾಂಸ ಭಕ್ಷಣೆಯನ್ನು ನಿಲ್ಲಿಸಬೇಕು ಎಂಬುದು ನನ್ನ ಸಿದ್ಧಾಂತ. ಇದು ಮಿಥೇನ್ ಬಿಡುಗಡೆಯನ್ನು ತಪ್ಪಿಸುತ್ತದೆ" ಎಂಬುದಾಗಿ ಈ ಸಸ್ಯಾಹಾರಿ ಸಚಿವರು ಹೇಳಿದ್ದಾರೆ.
ಮಾಂಸ ತಿನ್ನದವರು ತಾಪಮಾನ ತಗ್ಗುವಿಕೆಗೆ ಸಹಾಯ ಮಾಡುತ್ತಾರೆ ಎಂಬುದು ರಮೇಶ್ ಅಭಿಪ್ರಾಯವಾಗಿದೆ. ಭಾರತೀಯರು ಮಾಂಸ ತಿನ್ನುವುದು ಸಹಜವಾದರೂ ಪಾಶ್ಚಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಸೇವನೆಯ ಪ್ರಮಾಣ ಅತ್ಯಂತ ಕಡಿಮೆ ಎಂದು ಜೈರಾಮ್ ಹೇಳಿದ್ದಾರೆ.
ಗೋಮಾಂಸ ಹಾಗೂ ಹಂದಿ ಮಾಂಸ ತಿನ್ನುವುದರಿಂದ ಮಿಥೇನ್ ಎಂಬ ಅನಿಲ ಬಿಡುಗಡೆಯಾಗುತ್ತದೆ ಎಂಬುದು ಇತ್ತೀನ ಸಂಶೋಧನೆಯಿಂದ ಸಾಬೀತಾಗಿದೆ. ಪರಿಸರ ಸಂರಕ್ಷಣೆಗಾಗಿ ಗೋ ಮತ್ತು ಹಂದಿ ಮಾಂಸ ಸೇವನೆ ನಿಲ್ಲಿಸಬೇಕು ಎಂದು ಅವರು ಹೇಳಿದ್ದಾರೆ. ಭಾರತದಲ್ಲಿ ಹೆಚ್ಚಿನ ಹಿಂದುಗಳು ಗೋಮಾಂಸ ಸೇವಿಸುವುದಿಲ್ಲ. ಅಂತೆಯೇ ಮುಸ್ಲಿಮರು ಹಂದಿ ಮಾಂಸ ಸೇವನೆ ಮಾಡುವುದಿಲ್ಲ.