ಬಾಳಾಠಾಕ್ರೆ ವಿರುದ್ಧ ವರದಿ ಮಾಡಿರುವ ಕಾರಣಕ್ಕಾಗಿ ಶಿವಸೇನಾ ಕಾರ್ಯಕರ್ತರು ಶುಕ್ರವಾರ ಟಿವಿ ಮಾಧ್ಯಮ ಕಚೇರಿಗಳ ಮೇಲೆ ದಾಳಿ ನಡೆಸಿ ದಾಂಧಲೆ ಎಬ್ಬಿಸಿದ್ದಾರೆ. ವಿಕ್ರೋಲಿಯಲ್ಲಿರುವ ನೆಟ್ವರ್ಕ್ 18 ಬಳಗದ ಒಂದು ಹಿಂದಿ ಹಾಗೂ ಮರಾಠಿ ವಾಹಿನಿ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಗೆ ಸಂಬಂಧಿಸಿದಂತೆ ಶಿವಸೇನೆಯ ಏಳು ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಸಚಿನ್ ತೆಂಡೂಲ್ಕರ್ ಕುರಿತು ಬಾಳಾಠಾಕ್ರೆ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಧೈಸಿ ವರದಿಮಾಡಿರುವ ಕಾರಣ ಶಿವಸೈನಿಕರು ದಾಳಿ ನಡೆಸಿದ್ದಾರೆ ಎಂಬುದಾಗಿ ಶಿವಸೇನಾದ ಮುಖವಾಣಿ ಪತ್ರಿಕೆ ಸಾಮ್ನಾದ ಸಂಪಾದಕ ಹಾಗೂ ಸಂಸದರೂ ಆಗಿರುವ ಸಂಜಯ್ ರಾವುತ್ ಹೇಳಿದ್ದಾರೆ. ಮುಂಬೈ ಎಲ್ಲರಿಗೂ ಸೇರಿದ್ದು ಎಂಬುದಾಗಿ ಸಚಿನ್ ನೀಡಿದ್ದ ಹೇಳಿಕೆಯನ್ನು ಠಾಕ್ರೆ ಟೀಕಿಸಿದ್ದರು. ನಾನು ಮಹಾರಾಷ್ಟ್ರಿಗನಾಗಿರುವುದಕ್ಕೆ ಹೆಮ್ಮೆ ಇದೆ. ಆದರೆ ನಾನು ಮೊದಲು ಭಾರತೀಯ ಎಂಬುದಾಗಿ ಸಚಿನ್ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಠಾಕ್ರೆ ಅವರು "ರಾಜಕೀಯ ಮಾಡುವುದು ಬಿಟ್ಟು ಸುಮ್ಮನೆ ಕ್ರಿಕೆಟ್‌ನತ್ತ ಗಮನ ಹರಿಸುವಂತೆ" ಹೇಳಿದ್ದರು.
ದಾಳಿಯ ವೇಳೆ ಕಚೇರಿಯಲ್ಲಿದ್ದ ಪತ್ರಕರ್ತರು ಗಾಯಗೊಂಡಿದ್ದಾರೆ. ಕೆಲವರ ಉಡುಪುಗಳೂ ಹರಿದುಹೋಗಿವೆ. ದಾಂಧಲೆ ನಡೆಸಿರುವ ಕಾರ್ಯಕರ್ತರು ಕಿಟಿಕಿ ಬಾಗಿಲು, ಪೀಠೋಪಕರಣಗಳನ್ನು ಪುಡಿಗೈದಿದ್ದಾರೆ.
ಇದಲ್ಲದೆ, ಭವಿಷ್ಯದಲ್ಲಿ ಶಿವಸೇನೆ ಅಥವಾ ಬಾಳಾಠಾಕ್ರೆ ವಿರುದ್ಧ ಯಾವುದೇ ವರದಿ ಮಾಡದಂತೆ ಪತ್ರಕರ್ತರನ್ನು ಎಚ್ಚರಿಸಿದ್ದಾರೆ. ನೀವು ಸೇನೆ ಅಥವಾ ಠಾಕ್ರೆ ವಿರುದ್ಧ ಏನೇ ಹೇಳಿದರೂ ನಾವು ಸಹಿಸುವುದಿಲ್ಲ ಎಂದು ದಾಳಿಕೋರರು ಧಮ್ಕಿ ಹಾಕಿದ್ದಾರೆ. ಅಲ್ಲದೆ, ಮುಖ್ಯ ಸಂಪಾದಕರಿಗಾಗಿ ಹುಡುಕಾಡುತ್ತಿದ್ದ ಕಾರ್ಯಕರ್ತರು ನಾವು ಅವರಿಗೆ ಪಾಠ ಕಲಿಸುತ್ತೇವೆ ಎಂದಿದ್ದಾರೆ.
ದಾಳಿಕೋರರ ವಿರುದ್ಧ ಕಾನೂನೀ ಕ್ರಮ ಕೈಗೊಳ್ಳುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌವಾಣ್ ಹೇಳಿದ್ದಾರೆ.