ಜಾರ್ಖಂಡಿನಲ್ಲಿ ಪ್ರಯಾಣಿಕರ ರೈಲಿನ ಮೇಲೆ ಗುರುವಾರ ನಕ್ಸಲರು ನಡೆಸಿರುವ ದಾಳಿಯನ್ನು 'ಹೇಡಿಗಳ ಕೃತ್ಯ' ಎಂದಿರುವ ಕೇಂದ್ರ ಗೃಹಕಾರ್ಯದರ್ಶಿ ಜಿ.ಕೆ. ಪಿಳ್ಳೈ, ನಕ್ಸಲರು ಉಗ್ರವಾದಿಗಳಾಗಿದ್ದು ಅವರ ಮೇಲೆ ಯಾವುದೇ ಅನುಕಂಪವಿಲ್ಲ ಎಂದು ಹೇಳಿದ್ದಾರೆ.
ಮಾವೋವಾದಿಗಳು ಮತ್ತು ಉಗ್ರವಾದಿಗಳ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ. ಅವರು ರೈಲು ನಿಲ್ದಾಣಗಳು, ರೈಲುಗಳು ಮೊಬೈಲು ಟವರ್ ಹಾಗೂ ಶಾಲೆಗಳಂತಹ ಸ್ಥಳಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲೂ ರೈಲನ್ನು ತಡೆದು ನಿಲ್ಲಿಸಿದ್ದರು. ಅವರ ಮೇಲೆ ಯಾವುದೇ ಕರುಣೆ ಇಲ್ಲ ಎಂಬುದಾಗಿ ಪಿಳ್ಳೈ ಹೇಳಿದ್ದಾರೆ. ಅವರು ಒರಿಸ್ಸಾ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಕೇಂದ್ರದ ಸಹಾಯದೊಂದಿಗೆ ವಿವಿಧ ರಾಜ್ಯಗಳ ಸಮನ್ವಯತೆಯೊಂದಿಗೆ ಕಾರ್ಯಾಚರಣೆ ನಡೆಸಿದರೆ, ಇದು ಮಾವೋವಾದಿಗಳ ವಿರುದ್ಧ ಹೋರಾಡಲು ಸಹಾಯವಾಗಬಹುದು ಎಂದು ಹೇಳಿದ್ದಾರೆ. ನಕ್ಸಲರ ವಿರುದ್ಧ ಯಾವುದೇ ಸೇನಾ ಕಾರ್ಯಾಚರಣೆಯನ್ನು ಯೋಜಿಸಿಲ್ಲ, ಆದರೆ ನಾಗರಿಕ ಆಡಳಿತವನ್ನು ಪುನಸ್ಥಾಪಿಸಲು ಪ್ರಯತ್ನಿಸಲಾಗುವುದು ಎಂದು ಅವರು ನುಡಿದರು.