ನಕ್ಸಲ್ ಉಪಟಳ ಜಾರ್ಖಂಡ್ ಮುಂದಿರುವ ಬಹುದೊಡ್ಡ ಸವಾಲು ಎಂದಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಎಂಥದೇ ಸಮಸ್ಯೆಯನ್ನೂ ಮಾತುಕತೆ ಮೂಲಕ ಬಗೆಹರಿಸಲು ಸಾಧ್ಯ ಎಂದು ಹೇಳಿದ್ದಾರಲ್ಲದೆ, ಅಹಿಂಸಾ ಮಾರ್ಗದಲ್ಲಿ ಸಮಸ್ಯೆ ಪರಿಹರಿಸಿಕೊಳ್ಳುವುದೇ ಸೂಕ್ತ ಮಾರ್ಗ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂಸೆಯನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸೋನಿಯಾ ಶುಕ್ರವಾರ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಸಮಾಜದ ಎಲ್ಲ ವರ್ಗಗಳ ಹಿತರಕ್ಷಣೆಯೇ ಕಾಂಗ್ರೆಸ್ ಧ್ಯೇಯ ಎಂದ ಅವರು, ಸೂಕ್ತ ಪುನರ್‌ವ್ಯವಸ್ಥೆ ಮಾಡದೆ ಯಾರನ್ನೂ ಸ್ಥಳಾಂತರಿಸುವುದಿಲ್ಲ ಎಂದರು. ಕೆಲವು ಸಂಘಟನೆಗಳಿಗೆ ಸ್ವಾರ್ಥವೇ ಮುಖ್ಯ ಎಂದ ಅವರು, ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಹೋಗಿಸಲು ಕಾಂಗ್ರೆಸ್-ಜೆವಿಎಂ-ಪಿ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಮತ ಹಾಕಲು ಮನವಿ ಮಾಡಿದರು.
"ನಾಯಕತ್ವ ಎಂದರೆ ಏನು ಎಂಬುದನ್ನು ಕಾಂಗ್ರೆಸ್ ಕೇಂದ್ರದಲ್ಲಿ 2004ರಿಂದ ತೋರಿಸುತ್ತಿದ್ದು, ಎರಡನೇ ಬಾರಿಗೆ ತನ್ನ ಪರವಾಗಿ ಜನಾದೇಶ ಪಡೆದಿದೆ. ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳು ರಾಷ್ಟ್ರದ ಮೂಲೆ ಮೂಲೆಯನ್ನೂ ತಲುಪುತ್ತಿವೆ. ಕಾಂಗ್ರೆಸ್ಸನ್ನು ಆಯ್ಕೆ ಮಾಡಿದರೆ ಇಲ್ಲಿಯೂ ಉತ್ತಮ ಯೋಜನೆಗಳು ಅನುಷ್ಠಾನ ಆಗುತ್ತವೆ" ಎಂಬ ಭರವಸೆ ನೀಡಿದರು.