ರೈತರ ಪ್ರತಿಭಟನೆ, ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಕಬ್ಬಿನ ಬೆಲೆ ನಿಗದಿ ಸಂಬಂಧ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಹಿಂತೆಗೆದುಕೊಳ್ಳುವುದಾಗಿ ಶುಕ್ರವಾರ ಪ್ರಕಟಿಸಿದ್ದು, ಈ ಹಿಂದಿದ್ದ ವ್ಯವಸ್ಥೆಯನ್ನೇ ಮುಂದುವರಿಸುವುದಾಗಿ ಹೇಳಿದೆ.
ಹಣಕಾಸು ಸಚಿವ ಪ್ರಣವ್ ಮುಖರ್ಜಿ ಶುಕ್ರವಾರ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಕಬ್ಬಿನ ಬೆಲೆ ನಿಗದಿಗೆ ಸಂಬಂಧಿಸಿದಂತೆ ತಿದ್ದುಪಡಿಯಾದ ಹೊಸ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವುದಾಗಿಯೂ ಸರ್ಕಾರ ಹೇಳಿದೆ.
ಸಭೆಯ ನಂತರ ವರದಿಗಾರರ ಜತೆ ಮಾತನಾಡಿದ ರಾಷ್ಟ್ರೀಯ ಲೋಕದಳ ನಾಯಕ ಅಜಿತ್ ಸಿಂಗ್, ರಾಜ್ಯ ಸರ್ಕಾರಗಳು ಕಬ್ಬಿನ ಬೆಲೆ ಪ್ರಕಟಿಸುವ ಮೊದಲಿದ್ದ ವ್ಯವಸ್ಥೆಯನ್ನೇ ಮುಂದುವರಿಸಲಿವೆ ಎಂದು ತಿಳಿಸಿದರು. ಇದೀಗ ರೈತರ ಪ್ರತಿಭಟನೆ ಮುಕ್ತಾಯಗೊಂಡಿದ್ದು, ಸೋಮವಾರದಿಂದ ಲೋಕಸಭೆ ಕಲಾಪ ಸುಗಮವಾಗಿ ಸಾಗಲಿದೆ ಎಂಬ ಭರವಸೆಯನ್ನು ಅವರು ನೀಡಿದರು.
ಕೇಂದ್ರ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯಲ್ಲಿ ರಾಜ್ಯ ಸರ್ಕಾರಗಳು ಹೆಚ್ಚಿನ ಬೆಲೆ ನಿಗದಿಪಡಿಸಿದಲ್ಲಿ ಆ ವ್ಯತ್ಯಾಸವನ್ನು ಅವುಗಳೇ ತುಂಬಿಕೊಳ್ಳಬೇಕು ಎಂದು ಹೇಳಲಾಗಿತ್ತು. ಮೊದಲಿದ್ದ ನಿಯಮಾವಳಿ ಪ್ರಕಾರ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಹಾಗೂ ರಾಜ್ಯ ಸರ್ಕಾರಗಳು ಪ್ರಕಟಿಸುವ ಬೆಲೆ ವ್ಯತ್ಯಾಸವನ್ನು ಸಕ್ಕರೆ ಕಾರ್ಖಾನೆಗಳೇ ತುಂಬಿಕೊಳ್ಳಬೇಕಿತ್ತು.
ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿ ಕಬ್ಬಿನ ಬೆಳೆಗಾರರು ವ್ಯಾಪಕ ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಸಂಸದರು ಪಕ್ಷಬೇಧ ಮರೆ ಪ್ರತಿಭಟನೆ ನಡೆಸಿದ್ದ ಕಾರಣ ಎರಡೂ ದಿನಗಳೂ ಸಹ ಕಲಾಪ ನಡೆಸಲಾಗದೆ, ಮುಂದೂಡಲಾಗಿತ್ತು.