ತನ್ನ ಮೊದಲ ಪತ್ನಿಯನ್ನು ಬಿಟ್ಟು, ಕುಟುಂಬವನ್ನು ತೊರೆದು, ಇಸ್ಲಾಂಗೆ ಪರಿವರ್ತನೆ ಹೊಂದಿ, ಅನುರಾಧ ಬಾಲಿ ಎಂಬ ಸಹಾಯಕ ಅಡ್ವೊಕೇಟ್ ಜನರಲ್ ಹಿಂದೆ ಹೋಗಿದ್ದ ಹರ್ಯಾಣದ ಮಾಜಿ ಮುಖ್ಯಮಂತ್ರಿ ಚಂದ್ರ ಮೋಹನ್, ಮದುವೆ - ಹನಿಮೂನ್ ಬಳಿಕ, ಜಗಳ - ವಿಚ್ಚೇದನದ ಹಂತ ತಲುಪಿ ಸರಿಸುಮಾರು ಒಂದು ವರ್ಷದ ಬಳಿಕ 'ಹಳೆ ಹೆಂಡತಿಯ ಪಾದವೇ ಗತಿ' ಎಂದು ಮನೆಗೆ ಮರಳಿದ್ದು, ಮಗನ ತಪ್ಪಗಳನ್ನೆಲ್ಲ ಹೊಟ್ಟೆಗೆ ಹಾಕಿಕೊಂಡಿರುವ ಅವರ ತಂದೆ ಹರ್ಯಾಣ ಜನಹಿತ್ ಕಾಂಗ್ರೆಸ್ ಮುಖ್ಯಸ್ಥ ಭಜನ್ ಲಾಲ್ ಅವರನ್ನು ಮರಳಿ ಮನೆಗೆ ಸೇರಿಸಿಕೊಂಡಿದ್ದಾರೆ.
ತಾನು ತನ್ನ ಮಗನನ್ನು ಮರಳಿ ಮನೆಗೆ ಸೇರಿಸಿಕೊಂಡಿದ್ದೇನೆ ಎಂಬುದಾಗಿ ಭಜನ್ ಲಾಲ್ ಮಾಧ್ಯಮಗಳವರಿಗೆ ಶುಕ್ರವಾರ ದೆಹಲಿಯಿಂದ ಫೋನ್‌ನಲ್ಲಿ ತಿಳಿಸಿದ್ದಾರೆ. ಅನುರಾಧ ಬಾಲಿಯನ್ನು ವಿವಾಹವಾಗಿ ಚಂದ್ರಮೋಹನ್ ತೆರಳಿದ್ದ ವೇಳೆ ತನ್ನ ಪುತ್ರ ತನ್ನ ಪಾಲಿಗೆ ಸತ್ತಂತೆ ಎಂಬುದಾಗಿ ಭಜನ್ ಲಾಲ್ ತಮ್ಮ ಅಸಮಾಧಾನ ಸೂಚಿಸಿದ್ದರು.
ಉಪಮುಖ್ಯಮಂತ್ರಿಯಾಗಿದ್ದ ಚಂದ್ರಮೋಹನ್ ತಿಂಗಳಾನುಗಟ್ಟಲೆ ವಿಧಾನಸಭೆಯತ್ತ ತಿರುಗಿಯೂ ನೋಡದೇ ಇದ್ದು, ವಿವಾಹ ವಿವಾದದಲ್ಲಿ ಸಿಲುಕಿದ್ದ ಚಂದ್ರಮೋಹನ್ ಆಲಿಯಾಸ್ ಚಾಂದ್ ಮೊಹಮ್ಮದ್‌ರನ್ನು ಅವರ ಸ್ಥಾನದಿಂದ ವಜಾ ಮಾಡಲಾಗಿತ್ತು.
ಚಂದ್ರಮೋಹನ್ ಹಾಗೂ ಅನುರಾಧಬಾಲಿ ಕಳೆದ ನವೆಂಬರ್ ತಿಂಗಳಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು 40 ದಿನದ ಬಳಿಕ ಪತಿಪತ್ನಿಯರಾಗಿ ಪ್ರತ್ಯಕ್ಷವಾಗಿದ್ದರು. ಈ ಇಬ್ಬರು ಇಸ್ಲಾಂಗೆ ಪರಿವರ್ತನೆಗೊಂಡಿದ್ದು, ಚಾಂದ್ ಮೊಹಮ್ಮದ್ ಹಾಗೂ ಫಿಜಾ ಎಂಬುದಾಗಿ ಹೆಸರು ಬದಲಿಸಿಕೊಂಡಿದ್ದರು.