ಗುಂಡು ಕರ್ಕರೆ ಜಾಕೆಟ್ ತೂರಿರಲಿಲ್ಲ: ಪೋಸ್ಟ್‌ಮಾರ್ಟಂ ವರದಿ
ಮುಂಬೈ, ಶನಿವಾರ, 21 ನವೆಂಬರ್ 2009( 17:37 IST )
ಮುಂಬೈ ಮೇಲೆ ಭಯೋತ್ಪಾದನಾ ದಾಳಿ ನಡೆದ ವೇಳೆ ಉಗ್ರರ ಗುಂಡೇಟಿನಿಂದ ಸಾವಿಗೀಡಾಗಿರುವ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಅವರು ಧರಿಸಿದ್ದ ಬುಲೆಟ್ ಪ್ರೂಫ್ ಜಾಕೆಟ್ ಮೂಲಕ ಗುಂಡು ತೂರಿರಲಿಲ್ಲ ಎಂದು ಮರಣೋತ್ತರ ಪರೀಕ್ಷೆಯ ವರದಿಗಳು ಹೇಳಿವೆ. ಕರ್ಕರೆ ಅವರಿಗೆ ಕತ್ತಿನ ಸುತ್ತ ಐದು ಗುಂಡುಗಳು ತಗುಲಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.
ಬುಲೆಟ್ ಪ್ರೂಫ್ ಜಾಕೀಟ್ ಧರಿಸಿದ್ದ ಕರ್ಕರೆ ಅವರಿಗೆ ತಗುಲಿರುವ ಗುಂಡುಗಳು, ಜಾಕೆಟ್ ಧರಿಸಿದ್ದ ದೇಹಭಾಗವನ್ನು ಹಾಯಲೇ ಇಲ್ಲ ಎಂದು ವರದಿ ತಿಳಿಸಿದೆ. ಅಲ್ಲದೆ, ಕರ್ಕರೆ ಅವರು ಭುಜದ ಭಾಗ, ಕತ್ತು ಮತ್ತು ಬಲಭುಜದ ಮಧ್ಯೆ ಗುಂಡುಗಳು ಪ್ರವೇಶಿಸಿದ್ದವು ಎಂದು ವರದಿ ತಿಳಿಸಿದೆ.
ಕರ್ಕರೆ ಅವರು ಧರಿಸಿದ್ದ ಗುಂಡು ನಿರೋಧಕ ಜಾಕೆಟ್ ಮೂಲಕ ಗುಂಡು ಹಾದಿದ್ದು ಅವರು ಸಾವನ್ನಪ್ಪಿದ್ದಾರೆ ಎಂಬುದಾಗಿ ಬಾಂಬೇ ಹೈಕೋರ್ಟಿನಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ದೂರಲಾಗಿತ್ತು. ಇಗೀಗ ಅವರ ಮರಣೋತ್ತರ ಪರೀಕ್ಷೆ ವರದಿಗಳು ಈ ಆಪಾದನೆಯನ್ನು ಅಲ್ಲಗಳೆಯುತ್ತಿವೆ.
"ಗುಂಡುನಿರೋಧಕ ಜಾಕೀಟು ಕತ್ತಿನಿಂದ ಸೊಂಟದ ತನಕ ದೇಹವನ್ನು ಮುಚ್ಚಬೇಕು. ಆದರೆ ಪ್ರಸಕ್ತ ಪ್ರಕರಣದಲ್ಲಿ ಕರ್ಕರೆ ಧರಿಸಿದ್ದ ಜಾಕೀಟು ಅವರ ಎದೆಭಾಗವನ್ನು ಮಾತ್ರ ಮುಚ್ಚಿದ್ದರೆ, ಕತ್ತಿನ ಭಾಗ ತೆರೆದಿತ್ತು" ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ದೂರಲಾಗಿತ್ತು.