ಜಿಹಾದಿ ಸಿದ್ಧಾಂತವು ವಸ್ತುಶಃ 'ದೇವರೊಬ್ಬ ವೇಶ್ಯಾವಾಟಿಕೆ ಮಾಲಕನೆಂದು' ಧ್ವನಿಸುವುದಿಲ್ಲವೇ ಎಂಬುದಾಗಿ ಹಿರಿಯ ನ್ಯಾಯವಾದಿ ಹಾಗೂ ಮಾಜಿ ಕೇಂದ್ರ ಸಚಿವ ರಾಮ್ ಜೇಠ್ಮಲಾನಿ ಅವರು ಉಗ್ರವಾದದ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ಕೇಳಿದ ಪ್ರಶ್ನೆಯಿಂದ ಅಸಮಾಧಾನಗೊಂಡ ಸೌದಿ ಅರೇಬಿಯ ರಾಯಭಾರಿ ಸಮ್ಮೇಳನದಿಂದ ಎದ್ದು ಹೊರ ನಡೆದ ಘಟನೆ ಸಂಭವಿಸಿದೆ.
"ಮುಸ್ಲಿಮೇತರರೊಂದಿಗೆ ಹೋರಾಡುವ ಮೂಲಕ ಹುತಾತ್ಮರಾಗುವ ಮುಸ್ಲಿಮರು ಸ್ವರ್ಗದಲ್ಲಿ ಜಾಗಪಡೆಯುತ್ತಾರೆ ಮತ್ತು ಅವರಿಗೆ ಅಲ್ಲಿ ಕನ್ಯೆಯರ ಸಹವಾಸ ದೊರೆಯುತ್ತದೆ ಎಂಬುದಾಗಿ ಇಸ್ಲಾಮಿನ ವಹಾಬ್ ಪಂಥವು ನಂಬುಗೆಹೊಂದಿದೆ ಎಂಬ ಜಿಹಾದಿ ಸಿದ್ಧಾಂತದ ಪ್ರಚಾರವು ದೇವರೊಬ್ಬ ವೇಶ್ಯಾವಾಟಿಕೆಯ ಮಾಲಕ ಎಂದೆನಿಸುವುದಿಲ್ಲವೇ" ಎಂಬುದಾಗಿ ಜೇಠ್ಮಲಾನಿ ಕೇಳಿದ ಪ್ರಶ್ನೆ ಸೌದಿ ರಾಯಭಾರಿಯನ್ನು ಕೆರಳಿಸಿತು.
ಭಾರತೀಯ ಸರ್ಕಾರ ಹಾಗೂ ಅಂತಾರಾಷ್ಟ್ರೀಯ ಸಮುದಾಯವು ಭಯೋತ್ಪಾದನೆಯ ವಿರುದ್ಧ ಹೊರಾಡುವಲ್ಲಿ ದೇವರನ್ನು ನಂಬಿ ಕುಳಿತುಕೊಳ್ಳಬಾರದು ಎಂಬುದಾಗಿ ಸಲಹೆ ಮಾಡಿದ ಉರಿ ನಾಲಗೆ ಖ್ಯಾತಿಯ ಜೇಠ್ಮಲಾನಿ, "ದೇವರು ಅಲ್‌ಜೈಮರ್ ರೋಗದಿಂದ ಬಳಲುತ್ತಿದ್ದಾನೆ" ಎಂಬುದನ್ನು ಹೇಳಲೂ ಹಿಂಜರಿಯಲಿಲ್ಲ. ಸರ್ಕಾರವು ಅಲಿಪ್ತ ಚಳುವಳಿಯ ಗೀಳಿನಿಂದ ಹೊರಬಂದು ಪಿಡುಗಳ ವಿರುದ್ಧ ಉತ್ತಮವಾಗಿ ಹೋರಾಡುವ ಪಡೆಗಳೊಂದಿಗೆ ಸೇರಿಕೊಳ್ಳಲಿ ಎಂಬ ಸಲಹೆಯನ್ನೂ ಮಾಡಿದರು.
ಜೇಠ್ಮಲಾನಿಯ ಈ ಹೇಳಿಕೆಯಿಂದ ಅಸಮಾಧಾನಗೊಂಡ ಸೌದಿ ರಾಯಭಾರಿ ಫೈಸಲ್-ಅಲ್-ಟ್ರಾಡ್ ಸಮ್ಮೇಳನದಿಂದ ಎದ್ದು ಹೊರನಡೆದರು. ಇದರಿಂದ ಮುಜುಗರಗೊಂಡ ಕಾನೂನು ಸಚಿವ ವೀರಪ್ಪ ಮೊಯ್ಲಿ ತಕ್ಷಣವೇ ಪ್ರತಿಕ್ರಿಯಿಸಿ, ಜೇಠ್ಮಲಾನಿ ಹೇಳಿಕೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಮೂಲಕ, ಈ ಹೇಳಿಕೆಯಿಂದ ಸರ್ಕಾರದ ಅಂತರ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದರು.