ಕರ್ನಾಟಕದ ಸಚಿವ ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಗಣಿಗಾರಿಕೆ ಕಂಪೆನಿಯ ಅಕ್ರಮಗಳ ಆರೋಪ ಕುರಿತು ಸಿಬಿಐ ತನಿಖೆ ನಡೆಸುವಂತೆ ಕೇಂದ್ರಸರ್ಕಾರಕ್ಕೆ ಮನವಿ ಮಾಡಲಾಗಿದೆಯೆಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ರೋಸಯ್ಯ ಸ್ಪಷ್ಟಪಡಿಸಿದ್ದಾರೆ.
ಆಂಧ್ರದ ತೆಲುಗುದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಆರೋಪಕ್ಕೆ ಪ್ರತಿಕ್ರಿಯಿಸಲು ಸುದ್ದಿಗೋಷ್ಠಿ ಕರೆದಿದ್ದ ಮುಖ್ಯಮಂತ್ರಿ ರೋಸಯ್ಯ, ಚಂದ್ರಬಾಬು ನಾಯ್ಡು ಅವರಿಂದ ತಾವು ಪಾಠ ಹೇಳಿಸಿಕೊಳ್ಳಬೇಕಾಗಿಲ್ಲ. ಅವರ ಜತೆ ತಾವು ಬಹಿರಂಗ ಚರ್ಚೆಗೆ ಸಿದ್ಧವಿರುವುದಾಗಿ ವಾಗ್ದಾಳಿ ಮಾಡಿದ್ದಾರೆ. ಒಂಎಂಸಿ ಅಕ್ರಮವನ್ನು ಮುಚ್ಚಿಹಾಕುವ ಪ್ರಯತ್ನವನ್ನು ತಾವು ಮಾಡಿಲ್ಲ.
ಸರ್ಕಾರ ಪ್ರತಿಪಕ್ಷಗಳಿಗೆ ಹೆದರುವಂತಹದ್ದೇನೂ ಇಲ್ಲ. ಚಂದ್ರಬಾಬು ನಾಯ್ಡುಗೆ ಬುದ್ಧಿಭ್ರಮಣೆಯಾಗಿರುವುರಿಂದ ಹುಚ್ಚುಚ್ಚಾಗಿ ಆರೋಪಿಸುತ್ತಿದ್ದಾರೆಂದು ರೋಸಯ್ಯ ಟೀಕಿಸಿದರು.
ಇದಕ್ಕೆ ಮುನ್ನ, ಚಂದ್ರಬಾಬು ನಾಯ್ಡು ಮುಖ್ಯಮಂತ್ರಿ ರೋಸಯ್ಯ ಮತ್ತು ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ಮಾಡಿದ್ದರು. ಓಬಳಾಪುರಂ ಮತ್ತು ಸಿದ್ದಾಪುರಂನ ಗ್ರಾಮಗಳಲ್ಲಿರುವ 6 ಗಣಿಗಳಲ್ಲಿ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಅಧಿಕಾರ ಸಮಿತಿಯು ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ನಾಯ್ಡು ಪ್ರತಿಕ್ರಿಯೆ ಹೊರಬಿದ್ದಿದೆ.
ಓಬಳಾಂಪುರಂ ಅಕ್ರಮಗಳ ಬಗ್ಗೆ ಕಣ್ಣುಮುಚ್ಚಿಕೊಂಡಿರುವ ಸರ್ಕಾರವನ್ನು ಸಮಿತಿ ಟೀಕಿಸಿದ್ದರೂ ರೋಸಯ್ಯ ಕುರ್ಚಿಗೆ ಅಂಟಿಕೊಂಡಿದ್ದಾರೆಂದು ನಾಯ್ಡು ಟೀಕಿಸಿದ್ದರು.ಯಡಿಯೂರಪ್ಪ ಅವರನ್ನು ಕೂಡ ಟೀಕಿಸಿರುವ ನಾಯ್ಡು, ರಾಜಕೀಯ ಉಳಿವಿಗಾಗಿ ಗಣಿ ಮಾಫಿಯಾಗೆ ಶರಣಾಗುವ ಮೂಲಕ ಮುಖ್ಯಮಂತ್ರಿ ಪದವಿಗೆ ಕಳಂಕ ಉಂಟುಮಾಡುತ್ತಿದ್ದಾರೆಂದು ಆರೋಪಿಸಿದರು.