ವಿವಾದಾಸ್ಪದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಕುರಿತಂತೆ, ಈ ಪ್ರಕರಣದ ತನಿಖೆಗಾಗಿ ನೇಮಿಸಲಾಗಿರುವ ನ್ಯಾಯಮೂರ್ತಿ ಮನ್‌ಮೋಹನ್ ಸಿಂಗ್ ಲಿಬರಾನ್ ಆಯೋಗವು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಲೋಕಸಭೆಯಲ್ಲಿ ವಿಪಕ್ಷ ನಾಯಕ ಎಲ್.ಕೆ. ಆಡ್ವಾಣಿ ಹಾಗೂ ಮಾಜಿ ಬಿಜೆಪಿ ಅಧ್ಯಕ್ಷ ಮುರಳಿ ಮನೋಹರ್ ಜೋಷಿ ಸೇರಿದಂತೆ ಇತರರ ಮೇಲೆ ದೋಷಾರೋಪಣೆ ಮಾಡಿದೆ ಎಂಬುದಾಗಿ ದೈನಿಕ ಒಂದು ವರದಿ ಮಾಡಿದೆ.
1992ರ ಡಿಸೆಂಬರ್ 6ರಂದು ನಡೆದಿರುವ ಈ ದುರ್ಘಟನೆಯನ್ನು ಕರಾರುವಾಕ್ಕಾಗಿ ಯೋಜಿಸಲಾಗಿದೆ ಎಂದು ಆಯೋಗವು ಹೇಳಿದೆ. ಆಗ ಅಧಿಕಾರದಲ್ಲಿದ್ದ ಪಿ.ವಿ. ನರಸಿಂಹ ರಾವ್ ಸರ್ಕಾರಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದು, ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಕಲ್ಯಾಣ್ ಸಿಂಗ್ ಸರ್ಕಾರದ ಮೇಲೆ ಗೂಬೆ ಕೂರಿಸಿದೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆ ಹಾಗೂ ಅಧಿಕೃತ ದಾಖಲೆಗಳು ಸೇರಿದಂತೆ ಆಯೋಗವು ಸಂಗ್ರಹಿಸಿರುವ ದಾಖಲೆಗಳ ಪ್ರಕಾರ ಬಾಬ್ರಿ ಮಸೀದಿ ಧ್ವಂಸವು ಪೂರ್ವಯೋಜಿತವಾದುದು ಎಂಬುದಾಗಿ ಆಯೋಗವು ತೀರ್ಮಾನಿಸಿದೆ ಎಂಬುದಾಗಿ ವರದಿ ತಿಳಿಸಿದೆ. ಇದಲ್ಲದೆ ಈ ನಾಯಕರಿಗೆ ಇದು ತಿಳಿದಿರಲಿಲ್ಲ ಅಥವಾ ಈ ಕುರಿತು ಅವರು ಅಮಾಯಕರು ಎನ್ನಲು ಯಾವುದೇ ದಾಖಲೆಗಳಿಲ್ಲ ಎಂಬುದಾಗಿ ವರದಿ ಹೇಳಿದೆ.
ರಾಮಜನ್ಮ ಭೂಮಿ-ಬಾಬ್ರಿ ಮಸೀದಿ ಸಂಕೀರ್ಣದಲ್ಲಿ ಆ ದಿನದಂದು ಏನೇನು ಆಯಿತು ಎಂಬ ಘಟನೆಗಳ ಸೂಕ್ಷ್ಮ ಪರಿಶೀಲನೆ ನಡೆಸಿದ ಆಯೋಗವು ಈ ತೀರ್ಮಾನಕ್ಕೆ ಬಂದಿದೆ. ವರದಿಯನ್ನು ಜೂನ್ 30ರಂದು ಸಲ್ಲಿಸಲಾಗಿದ್ದು ಪ್ರಸಕ್ತ ಸಂಸತ್ ಅಧಿವೇಶನಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.
ಇದಲ್ಲದೆ ಬಾಬ್ರಿ ಮಸೀದಿ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತೀಯ ಬಾಬ್ರಿ ಮಸೀದಿ ಕ್ರಿಯಾ ಸಮಿತಿಯನ್ನು ಪ್ರತಿನಿಧಿಸುವ ಮುಸ್ಲಿಂ ನಾಯಕರ ಮೇಲೂ ಆಯೋಗವು ಗಂಭೀರ ಟೀಕೆ ಮಾಡಿದೆ. ಈ ಮುಸ್ಲಿಂ ಸಂಘಟನೆಗಳ ಪ್ರಮುಖ ನಾಯಕರು ಯಾವ ಪ್ರಾತಿನಿಧ್ಯದ ಉದ್ದೇಶ ಹೊಂದಿದ್ದರೋ, ಆ ಜವಾಬ್ದಾರಿಯನ್ನು ಹೊಂದಿರಲಿಲ್ಲ, ಅಥವಾ ಯಾವ ಕಲ್ಯಾಣವನ್ನೂ ಮಾಡಿರಲಿಲ್ಲ ಎಂದು ಆಯೋಗ ದೂರಿದೆ.