ಭಾರತೀಯ ಮುಸ್ಲಿಮರು ಮೂಲತಹ ಹಿಂದುಗಳಾಗಿದ್ದು, ಹಿಂದೂ ವಿಧಿವಿಧಾನಗಳನ್ನು ಅನುಸರಿಸುತ್ತಾರೆ ಎಂಬುದಾಗಿ ಹೇಳುವ ಮೂಲಕ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ. ಭಾರತೀಯ ಮುಸ್ಲಿಮರು ವಸ್ತುಶಃ ಹಿಂದುಗಳು ಎಂಬುದಾಗಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಹೇಳಿದ್ದಾರೆ.
"ಭಾರತವು ಹಿಂದೂಗಳ ರಾಷ್ಟ್ರ. ಇಲ್ಲಿರುವ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರೂ ಸಹ ಪಾರಂಪರ್ಯವಾಗಿ ಹಿಂದು ಸಂಸ್ಕೃತಿಯನ್ನು ಅನುಸರಿಸುತ್ತಿರವ ಕಾರಣ ಅವರೂ ಸಹ ಹಿಂದುಗಳು. ಅವರ ಮೂಲವೂ ಹಿಂದುತ್ವದಲ್ಲಿದೆ" ಎಂಬುದಾಗಿ ಭಾಗ್ವತ್ ಹೇಳಿದ್ದಾರೆ. ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಆರ್ಎಸ್ಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಿದ್ದರು.
ತಮ್ಮ ಪೂರ್ವಿಕರು ಭಜನೆಗಳನ್ನು ಹಾಡುತ್ತಿದ್ದ ಕಾರಣ ಮುಸ್ಲಿಮರೀಗ ಕವ್ವಾಲಿ ಹಾಡುತ್ತಿದ್ದಾರೆ. ಅವರು ಮಹಾನ್ ಮುಸ್ಲಿಂ ಸಂತರ ಸಮಾಧಿಯನ್ನು ಪೂಜಿಸುತ್ತಾರೆ. ಸಮಾಧಿಗಳಿಗೆ ಚಾದರ್ ಅರ್ಪಿಸುವ ಮುಸ್ಲಿಮರ ನಂಬುಗೆಯು ಹಿಂದೂಗಳ ಮೂರ್ತಿ ಪೂಜೆಗೆ ಸಮ ಎಂದು ಹೇಳಿದ್ದಾರೆ.
"ನಮ್ಮದು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರ. ನಾವೆಲ್ಲರೂ ಹಲವಾರು ಭಾಷೆಗಳನ್ನು ಮಾತನಾಡುತ್ತಿದ್ದು, ವಿವಿಧ ಧರ್ಮ, ಸಂಸ್ಕೃತಿ, ಸಂಪ್ರದಾಯ ಹಾಗೂ ಆಹಾರ ಸಂಸ್ಕೃತಿಯನ್ನು ಹೊಂದಿದ್ದರೂ ನಾವೆಲ್ಲರೂ ಒಂದೇ. ಎಲ್ಲಾ ಭಾರತೀಯರೂ ಹಿಂದುತ್ವದಿಂದ ಸ್ಫೂರ್ತಿಹೊಂದಿದ್ದು ಇದು ಸನಾತನ ಧರ್ಮದ ಜೀವನ ಕ್ರಮವಾಗಿದೆ" ಎಂಬುದಾಗಿ ಅವರು ತನ್ನ ಭಾಷಣದಲ್ಲಿ ಹೇಳಿದ್ದಾರೆ.