ಮುಂಬೈ ಮಹಾನಗರಿ ಮೇಲೆ ನಡೆದ ಭಯೋತ್ಪಾದನಾ ದಾಳಿ ಸಂದರ್ಭದಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಕಸಬ್‌ನನ್ನು ಗಲ್ಲಿಗೇರಿಸಿ, ತಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಕಸಬ್ ಗುಂಡಿಗೆ ಬಲಿಯಾಗಿದ್ದ ಮುಂಬೈ ಭಯೋತ್ಪಾದನಾ ನಿಗ್ರಹ ಪಡೆಯ ಮುಖ್ಯಸ್ಥ ಹೇಮಂತ್ ಕರ್ಕರೆ ಪತ್ನಿ ಕವಿತಾ ಕರ್ಕರೆ ಸೋಮವಾರ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಒತ್ತಾಯಿಸಿದ್ದಾರೆ.
ಇಂದು ಸೋನಿಯಾಗಾಂಧಿ ಅವರನ್ನು ಭೇಟಿಯಾದ ಕವಿತಾ, ಕಸಬ್‌ನನ್ನು ಗಲ್ಲಿಗೇರಿಸಿ, ಆ ಮೂಲಕ ಮುಂಬೈ ದಾಳಿಯಲ್ಲಿ ಮಡಿದವರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಿ ಎಂದು ಒತ್ತಾಯಿಸಿದ್ದಾರೆ. ತಮಗೆ ಈ ಪ್ರಕರಣದಲ್ಲಿ ಸೋನಿಯಾ ಅವರಿಂದ ನ್ಯಾಯ ಸಿಗುವ ಭರವಸೆ ಇರುವುದಾಗಿ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ನವೆಂಬರ್ 26ಕ್ಕೆ ಮುಂಬೈ ಭಯೋತ್ಪಾದನೆ ದಾಳಿ ಒಂದು ವರ್ಷ ಪೂರೈಸಲಿದೆ. ಪಾಕಿಸ್ತಾನ ಮೂಲದ ಒಂಬತ್ತು ಉಗ್ರರು ಬೋಟ್ ಮೂಲಕ ಮುಂಬೈ ತಲುಪಿ ತಾಜ್ ಹೊಟೇಲ್ ಸೇರಿದಂತೆ ಮೂರು ಪ್ರಮುಖ ಸ್ಥಳಗಳಲ್ಲಿ ವಿದೇಶಿ ಪ್ರವಾಸಿಗರನ್ನು ಒತ್ತೆಯಾಳನ್ನಾಗಿರಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮುಂಬೈ ಭಯೋತ್ಪಾದನಾ ನಿಗ್ರಹ ಪಡೆಯ ಮುಖ್ಯಸ್ಥ ಹೇಮಂತ್ ಕರ್ಕರೆ, ವಿಜಯ್ ಸಲಸ್ಕರ್, ಸಂದೀಪ್ ಉನ್ನಿಕೃಷ್ಣನ್, ಅಶೋಕ್ ಕಾಮ್ಟೆ ಬಲಿಯಾಗಿದ್ದರು. ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 170ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು.