ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿ "ಸೋರಿಕೆ"ಯಾದ ಲಿಬರ್ಹಾನ್ ಆಯೋಗದ ವರದಿಯಲ್ಲಿ ಬಿಜೆಪಿಯ ಇತರ ಮುಖಂಡರೊಂದಿಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನೂ ಸೇರಿಸಿರುವುದು ವಿಸ್ಮಯ ಮೂಡಿಸಿದೆ ಎಂದು ಲಿಬರ್ಹಾನ್ ಆಯೋಗದ ಮಾಜಿ ವಕೀಲ ಅನುಪಮ್ ಗುಪ್ತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಿನ್ನಾಭಿಪ್ರಾಯದಿಂದಾಗಿ ಜಸ್ಟೀಸ್ ಎಂ.ಎಸ್.ಲಿಬರ್ಹಾನ್ ಆಯೋಗದಿಂದ ಹೊರಗೆ ಬಂದಿದ್ದ ಅನುಪಮ್ ಗುಪ್ತಾ ಅವರು ಹಲವು ವರ್ಷಗಳ ಕಾಲ ಆಯೋಗದ ಸಲಹಾಕಾರರಾಗಿ ಕಾರ್ಯ ನಿರ್ವಹಿಸಿದ್ದರು. ವಾಜಪೇಯಿ ಹೆಸರು ಸೇರಿಸಿರುವುದು 'ಅಕ್ರಮ' ಎಂದೂ ಗುಪ್ತಾ ಬಣ್ಣಿಸಿದ್ದಾರೆ.
ಆಯೋಗದೆದುರು ತನ್ನ ಅಭಿಪ್ರಾಯ ಮಂಡಿಸಲು ಅವಕಾಶವೇ ದೊರೆಯದಿದ್ದ ವ್ಯಕ್ತಿಯನ್ನೂ ಆಯೋಗದ ವರದಿಯಲ್ಲಿ ತಪ್ಪಿತಸ್ಥರ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಸೋರಿದ ವರದಿಗಳು ಹೇಳುತ್ತಿವೆ. ಇದು ನಿಜವಾಗಿದ್ದರೆ, ಖಂಡಿತವಾಗಿಯೂ ನ್ಯಾಯದ ಅಣಕ ಮತ್ತು ನನ್ನ ಪ್ರಕಾರ ಇದು ಅಕ್ರಮವೂ ಹೌದು. ಇದು ತೀರಾ ಅಚ್ಚರಿ ಮೂಡಿಸಿದೆ ಎಂದು ಗುಪ್ತಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸದ್ಯಕ್ಕೆ ಚಂಡೀಗಢ ಆಡಳಿತದ ಹಿರಿಯ ಸ್ಥಾಯಿ ವಕೀಲರಾಗಿರುವ ಗುಪ್ತಾ ಅವರು, ಆಡ್ವಾಣಿ, ಜೋಷಿ, ಉಮಾ ಮತ್ತಿತರರನ್ನು ವಿಚಾರಣೆಗೊಳಪಡಿಸಿದ್ದರು.
ಆಡ್ವಾಣಿ ಅವರನ್ನು ಗುಪ್ತಾ ವಿಚಾರಣೆಗೊಳಪಡಿಸಿದ ರೀತಿ 'ತೀರಾ ಆಕ್ರಮಣಕಾರಿ' ಎಂಬ ವಿಷಯಕ್ಕೆ ಸಂಬಂಧಿಸಿ ನ್ಯಾಯಮೂರ್ತಿ ಲಿಬರ್ಹಾನ್ ಹಾಗೂ ಗುಪ್ತಾ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು.
ಯಾವುದೇ ಹಂತದಲ್ಲಿ ಕೂಡ ವಾಜಪೇಯಿ ಅವರನ್ನು ಆಯೋಗವು ವಿಚಾರಣೆಗಾಗಿ ಕರೆಸಲೇ ಇಲ್ಲ. ಯಾಕೆಂದರೆ, ವಿವಾದಿತ ಕಟ್ಟಡದ ಧ್ವಂಸ ಪ್ರಕರಣದಲ್ಲಿ ಅವರು ಯಾವುದೇ ರೀತಿಯಲ್ಲಿಯೂ ನೇರವಾದ ಪಾತ್ರ ಹೊಂದಿರಲಿಲ್ಲ ಎಂದು ಗುಪ್ತಾ ವಿವರಿಸಿದ್ದಾರೆ.
ಇದೇ ಸಂದರ್ಭ, ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರನ್ನು ನಿರ್ದೋಷಿ ಎಂದು ಆಯೋಗವು ಸಾರಿರುವ ಸಂಗತಿಯನ್ನೂ ಗುಪ್ತಾ ಪ್ರಶ್ನಿಸಿದ್ದಾರೆ.