ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಕುರಿತ ಲಿಬರ್ಹಾನ್ ಆಯೋಗದ ವರದಿಯನ್ನು ಗೃಹಸಚಿವ ಪಿ.ಚಿದಂಬರಂ ಮಂಡಿಸಿದ ಕೂಡಲೇ ಘೋಷಣೆಗಳ ಕೂಗಾಟದ ನಡುವೆ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ಸದಸ್ಯರ ನಡುವೆ ಮಾರಾಮಾರಿ ನಡೆದ ಘಟನೆಗೆ ರಾಜ್ಯಸಭೆ ಮಂಗಳವಾರ ಸಾಕ್ಷಿಯಾಯಿತು.
ಶೂನ್ಯ ವೇಳೆಯಲ್ಲಿ ಗೃಹಸಚಿವರು ವರದಿಯ ಪ್ರತಿಯನ್ನು ಮಂಡಿಸಲು ಎದ್ದು ನಿಲ್ಲುತ್ತಿದ್ದಂತೆಯೇ, ಬಿಜೆಪಿ ಸದಸ್ಯರು ಜೈ ಶ್ರೀರಾಂ ಘೋಷಣೆಗಳನ್ನು ಕೂಗಲು ಆರಂಭಿಸಿದ್ದು, ಎಸ್‌ಪಿ ಸದಸ್ಯ ಅಮರ್ ಸಿಂಗ್ ಅವರನ್ನು ಕೆರಳಿಸಿತು. ಅಮರ್‌ಸಿಂಗ್ ತಮ್ಮ ಪಕ್ಷದ ಸದಸ್ಯರೊಂದಿಗೆ ಮೊದಲನೇ ಸಾಲಿನಲ್ಲಿದ್ದ ಎಸ್.ಎಸ್. ಅಹ್ಲುವಾಲಿಯ ಅವರತ್ತ ನುಗ್ಗಿ ಅವರ ಕಾಲರ್ ಹಿಡಿದು ಜಗ್ಗಿದರು.
ಸಿಂಗ್ ಮತ್ತು ಅಹ್ಲುವಾಲಿಯ ನಡುವೆ ಮಾರಾಮಾರಿ ಆರಂಭವಾದ ಕೂಡಲೇ ಅವರ ಪಕ್ಷದ ಸದಸ್ಯರು ಧಾವಿಸಿದ್ದರಿಂದ ಬಿಜೆಪಿ ಮತ್ತು ಎಸ್‌ಪಿ ಸದಸ್ಯರ ನಡುವೆ ಪರಸ್ಪರ ತಳ್ಳಾಟ ನಡೆಯಿತು.
ಸದನದಲ್ಲಿ ಅನುಚಿತ ವರ್ತನೆಯಿಂದ ಉಪಸಭಾಪತಿ ರೆಹ್ಮಾನ್ ಖಾನ್ ಅಸಮಾಧಾನಗೊಂಡು, ಸದನದ ಮುಂದೂಡಿಕೆ ಪ್ರಕಟಿಸದೇ ಸೀದಾ ಕುರ್ಚಿಯಿಂದ ಎದ್ದು ನಿರ್ಗಮಿಸಿದರು. ಬಿಜೆಪಿ ಮತ್ತು ಎಸ್‌ಪಿ ಸದಸ್ಯರು ತಮ್ಮ ಸ್ಥಾನಗಳಿಗೆ ನಿರ್ಗಮಿಸಿ ಘೋಷಣೆ, ಪ್ರತಿಘೋಷಣೆಗಳನ್ನು ಕೂಗಿದರು.
ಕ್ಷಮೆ ಯಾಚನೆಗೆ ಸಿದ್ದ-ಅಮರ್ ಸಿಂಗ್: ಸದನದಲ್ಲಿ ಲಿಬರ್ಹಾನ್ ವರದಿ ಮಂಡನೆಯಾದ ಕೂಡಲೇ ಬಿಜೆಪಿ ಸದಸ್ಯರಿಂದ ಹೊರಬಿದ್ದ ಜೈಶ್ರೀರಾಂ ಘೋಷಣೆಯಿಂದ ತಾಳ್ಮೆ ಕಳೆದುಕೊಂಡ ಸಮಾಜವಾದಿ ಪಕ್ಷದ ಅಮರ್ ಸಿಂಗ್ ಅವರು ಅಹ್ಲುವಾಲಿಯ ಅವರನ್ನು ಹಿಡಿದು ಜಗ್ಗಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ಅವರಲ್ಲಿ ಕ್ಷಮೆ ಕೇಳಲು ಸಿದ್ದ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ನಿಜಕ್ಕೂ ನಾನು ಅವರೊಂದಿಗೆ ಅನುಚಿತವಾಗಿ ವರ್ತಿಸಬಾರದಿತ್ತು. ಅವರು ಹಿರಿಯರು, ಸದನದಲ್ಲಿ ನಡೆದ ಘಟನೆ ಕುರಿತಂತೆ ನಾನು ಅವರಲ್ಲಿ ಕ್ಷಮೆ ಕೇಳಲು ಸಿದ್ದ, ಈ ಘಟನೆಯನ್ನು ಸದನದಲ್ಲಿದ್ದ ಎಲ್ಲರೂ ಮರೆಯಬೇಕೆಂದು ಕೋರುವುದಾಗಿ ಹೇಳಿದರು. ತಾನು ಕೂಡ ಕ್ಷತ್ರಿಯ ಅಲ್ಲದೆ ರಾಮ ಭಕ್ತನೂ ಹೌದ. ಹಾಗಂತ ರಾಮನನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಅದು ಧಾರ್ಮಿಕವಾಗಿಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.