ಲಿಬರ್ಹಾನ್ ಆಯೋಗದ ವರದಿ ಬಹಿರಂಗವಾದ ಬಗ್ಗೆ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ಮುಂದುವರಿಸಿದ್ದು, ಈ ದೋಷದ ಹೊಣೆ ಹೊತ್ತು, ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದೆ. ಸಂಸತ್ತಿನ ಹೊರಗೆ ವರದಿಗಾರರ ಜತೆ ಮಾತನಾಡುತ್ತಿದ್ದ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್, 'ಗೃಹಸಚಿವರು ಲಿಬರ್ಹಾನ್ ವರದಿ ಸೋರಿಕೆಗೆ ನೈತಿಕ ಜವಾಬ್ದಾರಿ ಹೊರಬೇಕು.
ಸೋರಿಕೆ ಕುರಿತು ತನಿಖೆ ನಡೆಸಿ, ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ ಸಂಸತ್ತಿಗೆ ವರದಿ ಸಲ್ಲಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.ಹಿರಿಯ ಬಿಜೆಪಿ ನಾಯಕ ಮುರಳಿ ಮನೋಹರ್ ಜೋಷಿ ಕೂಡ ವರದಿ ಸೋರಿಕೆ ಕುರಿತು ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒತ್ತಾಯಿಸಿದ್ದಾರೆ.'ವರದಿಯ ಎರಡು ಪ್ರತಿಗಳಿದ್ದು, ಒಂದು ಸರ್ಕಾರದ ಬಳಿ, ಇನ್ನೊಂದು ನ್ಯಾಯಮೂರ್ತಿ ಲಿಬರ್ಹಾನ್ ಬಳಿಯಿವೆಯೆಂದು ಗೃಹಸಚಿವ ಚಿದಂಬರಂ ಅವರು ಹೇಳಿದ್ದಾರೆ. ಹಾಗಾದರೆ ವರದಿ ಸೋರಿಕೆಯಾಗಿದ್ದು ಹೇಗೆ' ಎಂದು ಅವರು ಪ್ರಶ್ನಿಸಿದ್ದಾರೆ.ಲಿಬರ್ಹಾನ್ ವರದಿ ಸೋರಿಕೆಯಾಗಿದ್ದು ಹೇಗೆಂಬುದು ಮುಖ್ಯವಿಷಯವಾಗಿದೆ.
ಇದಕ್ಕೆ ಸರ್ಕಾರ ಮತ್ತು ಗೃಹಸಚಿವರು ನೈತಿಕ ಹೊಣೆ ಹೊರಬೇಕು. ವರದಿ ಸೋರಿಕೆಯಾಗಿದ್ದು ಹೇಗೆಂದು ತನಿಖೆಗೆ ಜಂಟಿ ಸಂಸದೀಯ ಸಮಿತಿ ನೇಮಿಸಬೇಕೆಂದೂ ಅವರು ಒತ್ತಾಯಿಸಿದ್ದಾರೆ.ರಾಮ ಮಂದಿರದ ನಿರ್ಮಾಣ ಕುರಿತು ಮಾತನಾಡಿದ ಜೋಷಿ, ತಾವು ರಾಮಮಂದಿರ ಆಂದೋಳನಕ್ಕೆ ಸದಾ ಬೆಂಬಲಿಸಿದ್ದಾಗಿ ಹೇಳಿದರು. ಅಯೋಧ್ಯೆ ವಿಷಯ ಕುರಿತಂತೆ ಅಲ್ಲಿ ಭವ್ಯ ಮಂದಿರ ನಿರ್ಮಿಸಬೇಕೆಂಬುದು ನಮ್ಮ ನಿಲುವಾಗಿದೆಯೆಂದು ಜೋಷಿ ಹೇಳಿದರು.