ಬಾಬರಿ ಮಸೀದಿ ಕೆಡಹಿದ್ದರ ಕುರಿತು ಬಲಪಂಥೀಯ ಗುಂಪುಗಳ ಮೇಲೆ ಆರೋಪ ಹೊರಿಸಲಾದ ಲಿಬರ್ಹಾನ್ ಆಯೋಗದ ವರದಿಯಲ್ಲಿ, ಈ ವಿವಾದವು ಉಚ್ಚಸ್ಥಿತಿಗೇರುವುದಕ್ಕೆ ಕಾರಣವಾದ ಘಟನೆಗಳ ಎದುರು ಪರಿಣಾಮಕಾರಿಯಾಗಿ ಪ್ರತಿಭಟನೆ ಮಾಡಲು ವಿಫಲವಾಗಿರುವ ಮುಸ್ಲಿಂ ಮತೀಯ ನಾಯಕತ್ವವನ್ನೂ ತರಾಟೆಗೆ ತೆಗೆದುಕೊಳ್ಳಲಾಗಿದೆ.
ಸಾವಿರ ಪುಟಗಳಿಗೂ ಸುದೀರ್ಘವಾಗಿದ್ದ ವರದಿಯಲ್ಲಿ, 'ವೈಯಕ್ತಿಕ ಅಥವಾ ಖಾಸಗಿ ಪ್ರಭಾವ ವೃದ್ಧಿಸಿಕೊಳ್ಳುವ ಅಥವಾ ಸ್ವಾರ್ಥಕ್ಕಾಗಿ ತಮ್ಮ ರಾಜಕೀಯ ಪ್ರಭಾವ ವೃದ್ಧಿಸಿಕೊಳ್ಳುವ ಕೆಟ್ಟ ಚಾಳಿ ಹೊಂದಿದ್ದ' ಕೆಲವು ಮುಸ್ಲಿಂ ನಾಯಕರನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.
ಆರೆಸ್ಸೆಸ್, ಬಿಜೆಪಿ, ವಿಹಿಂಪ, ಶಿವಸೇನೆ, ಬಜರಂಗದಳ ಮತ್ತು ಬಿಜೆಪಿಗಳು ಮಂದಿರ ಆಂದೋಲನವನ್ನು ಪರಿಣಾಮಕಾರಿಯಾಗಿ ಬಿಂಬಿಸಿ, ವಿಷಯವನ್ನು ಪ್ರಮುಖವಾಗಿ ಬಿಂಬಿಸುವಲ್ಲಿ ಮತ್ತು ವಿವಾದವು ಕುದಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರೆ, ಇದಕ್ಕೆ ಪ್ರತಿಯಾಗಿ ಕ್ರಮ ಕೈಗೊಳ್ಳಬೇಕಿದ್ದ ಮತೀಯ ಮುಸ್ಲಿಂ ನಾಯಕತ್ವದ ಬಳಿ, ಸೂಕ್ತವಾದ ಅಥವಾ ಪರಿಣಾಮಕಾರಿ ನಾಯಕತ್ವ ಇರಲಿಲ್ಲ, ಅಥವಾ ಇದ್ದವರೂ ಸಮರ್ಥರಾಗಿರಲಿಲ್ಲ ಎಂದು ಹೇಳಿದೆ.
ಆರೆಸ್ಸೆಸ್ ಮತ್ತು ವಿಹಿಂಪ ನಾಯಕತ್ವವು ಒಡ್ಡಿದ್ದ ಆತಂಕಗಳಿಗೆ ಪ್ರತಿಕ್ರಮಗಳನ್ನು ಕೈಗೊಳ್ಳುವಲ್ಲಿ ಬಾಬರಿ ಮಸೀದಿ ಕ್ರಿಯಾ ಸಮಿತಿ (ಬಿಎಂಎಸಿ) ಮತ್ತು ಆ ಬಳಿಕದ ಅಖಿಲ ಭಾರತ ಬಾಬರಿ ಮಸೀದಿ ಕ್ರಿಯಾ ಸಮಿತಿ (ಎಐಬಿಎಂಎಸಿ) ವಿಫಲತೆ ಅನುಭವಿಸಿತು. ಅದರ ಬದಲಾಗಿ, ರಕ್ಷಣಾತ್ಮಕ ಕಾರ್ಯತಂತ್ರದಂತೆ ಆರಂಭವಾಗಿದ್ದ ಅವಕಾಶವನ್ನೇ ಮುಂದುವರಿಸುವಂತೆ ಸಂಘಪರಿವಾರಕ್ಕೆ ಎಡೆಮಾಡಿಕೊಟ್ಟಿತು ಎಂದು ವರದಿ ಹೇಳಿದೆ.
ಸಂಸತ್ತಿನಲ್ಲಿ ಮಂಗಳವಾರ ಮಂಡಿಸಲಾದ ವರದಿಯ ಪ್ರಕಾರ, ದೇಶದಲ್ಲಿ ಸಂಘರ್ಷದ ಅಲೆ ಸೃಷ್ಟಿಸುವಲ್ಲಿ ಚರಿತ್ರೆ ತಿರುಚುವ ಸಂಘ ಪರಿವಾರದ ಪ್ರಯತ್ನಗಳಿಗೆ ಪ್ರತಿತಂತ್ರ ರೂಪಿಸಲು ಮುಸ್ಲಿಂ ನಾಯಕತ್ವ ವಿಫಲವಾಯಿತು ಎಂದೂ ವಿವರಿಸಲಾಗಿದೆ. ಇದರಿಂದಾಗಿ ಸಂಘ ಪರಿವಾರದ ಕಾರ್ಯ ಸುಲಭವಾಗಿಬಿಟ್ಟಿತು. ಇದು ತಮ್ಮ ಸಮಾಜಕ್ಕೆ ಎದುರಾದ ಕಂಟಕವನ್ನು ಪರಿಣಾಮಕಾರಿಯಾಗಿ ಎದುರಿಸುವಲ್ಲಿ ಮತ್ತು ಆ ಮೂಲಕ ಪ್ರಜಾಸತ್ತಾತ್ಮಕ ವಿರೋಧವನ್ನು ಪರಿಣಾಮಕಾರಿಯಾಗಿ ನೀಡುವಲ್ಲಿ ವಿಫಲವಾಯಿತು ಎಂದು ಜಸ್ಟೀಸ್ ಲಿಬರ್ಹಾನ್ ವರದಿಯಲ್ಲಿ ಹೇಳಲಾಗಿದೆ.