ಸಂಸತ್‌ನಲ್ಲಿ ಸೋಮವಾರ ತೀವ್ರ ಕೋಲಾಹಲಕ್ಕೆ ಕಾರಣವಾಗಿದ್ದ ಲಿಬರ್ಹಾನ್ ಆಯೋಗದ ವರದಿಯನ್ನು ಮಂಗಳವಾರ ಸಂಸತ್‌ನಲ್ಲಿ ಗೃಹಸಚಿವ ಪಿ.ಚಿದಂಬರಂ ಮಂಡಿಸಿದ್ದು, ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘ ಪರಿವಾರದ ಹಿರಿ ತಲೆಗಳು ಸೇರಿದಂತೆ 68ಮಂದಿಯನ್ನು ಆರೋಪಿ ಸ್ಥಾನದಲ್ಲಿ ಇರಿಸಿದೆ.
ದೇಶಾದ್ಯಂತ ಕೋಮುದಳ್ಳುರಿಗೆ ಕಾರಣವಾಗಿದ್ದ ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣಾ ಆಯೋಗದ ವರದಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ ಹಾಗೂ ಶಿವಸೇನಾದ ವರಿಷ್ಠ ಬಾಳಾ ಠಾಕ್ರೆ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ವಿಶ್ವ ಪರಿಷತ್ ಮುಖಂಡ ಅಶೋಕ್ ಸಿಂಘಾಲ್, ಪ್ರವೀಣ್ ತೊಗಾಡಿಯಾ, ಅಶೋಕ್ ಸಿನ್ನಾ, ಬದ್ರಿ ಪ್ರಸಾದ್ ತೋಶ್ನಿವಾಲ್,ಬೈಕುಂಠ್ ಲಾಲ್ ಶರ್ಮಾ, ಬಿ.ಪಿ.ಸಿಂಘಾಲ್, ಬ್ರಹ್ಮದತ್ ದಿವೇದಿ (ಉತ್ತರ ಪ್ರದೇಶ ಕಂದಾಯ ಸಚಿವ), ಜಿ.ಎಂ.ಲೋಧಾ (ಬಿಜೆಪಿ ಮುಖಂಡ), ಎಚ್.ವಿ.ಶೇಷಾದ್ರಿ(ಆರ್‌ಎಸ್‌ಎಸ್ ಮುಖಂಡ),ಲಾಲ್ ಜಿ ಟಂಡನ್ (ಇಂಧನ ಸಚಿವ ಉತ್ತರಪ್ರದೇಶ), ಮಹಾಂತ್ ಅವೈದ್ಯನಾಥ್ (ಹಿಂದೂ ಮಹಾಸಭಾ ಮುಖಂಡ) ಮಹಾಂತ್ ಗೋಪಾಲ್ ದಾಸ್, ಮಹಾಂತ್ ಪರಮಹಂಸ ರಾಣ್ ಚಂದರ್‌ದಾಸ್, ಮೋರೇಶ್ವರ್ ದೀನನಾಥ್ ಸಾವೆ (ಶಿವಸೇನೆ), ಮೊರ್‌ಪಂತ್ ಪಿಂಗಳೆ(ಶಿವಸೇನೆ), ಓಂಪ್ರತಾಪ್ ಸಿಂಗ್, ಓಂಕಾರ್ ಭಾವಾ (ವಿಎಚ್‌ಪಿ), ದಿ.ಪ್ರಮೋದ್ ಮಹಾಜನ್ (ಬಿಜೆಪಿ), ಪ್ರಭಾತ್ ಕುಮಾರ್, ಪುರುಷೋತ್ತಮ್ ನರೈನ್ ಸಿಂಗ್, ರಾಜೇಂದ್ರ ಗುಪ್ತಾ (ಉತ್ತರಪ್ರದೇಶ ಸಚಿವ),ರಾಜೇಂದ್ರ ಸಿಂಗ್, ರಾಮ್ ಶಂಕರ್ ಅಗ್ನಿಹೋತ್ರಿ, ರಾಮ್ ವಿಲಾಸ್ ವೇದಾಂತಿ, ಆರ್.ಕೆ.ಗುಪ್ತಾ, ಆರ್.ಎನ್. ಶ್ರೀವಾಸ್ತವ್, ಶಂಕರ್ ಸಿಂಗ್ ವಾಘೇಲಾ,ಸತೀಶ್ ಪ್ರದಾನ್, ಶ್ರೀಚಂದರ್ ದೀಕ್ಷಿತ್, ಆರ್‌ಎಸ್‌ಎಸ್ ಮುಖಂಡ ಕೆ.ಎಸ್.ಸುದರ್ಶನ್, ಗೋವಿಂದಾಚಾರ್ಯ, ದಿ.ವಿಜಯ್ ರಾಜೆ ಸಿಂಧ್ಯ, ವಿನಯ್ ಕಟಿಯಾರ್, ಉಮಾ ಭಾರತಿ ಹಾಗೂ ಸಾಧ್ವಿ ರಿತಂಬರಾ, ಎ.ಕೆ.ಸರನ್, ಪೊಲೀಸ್ ಮಹಾನಿರ್ದೇಶಕ ವಿ.ಕೆ.ಸೆಕ್ಸೇನಾ ಸೇರಿದ್ದಾರೆ.
PTI
ವಾಜಪೇಯಿ, ಅಡ್ವಾಣಿ ಕಪಟ ಮಂದಗಾಮಿಗಳು: ವಾಜಪೇಯಿ, ಅಡ್ವಾಣಿ ಹಾಗೂ ಸಂಘ ಪರಿವಾರ ಇವರು ಭಾರತದಲ್ಲಿನ ಮತೀಯ ಸೌಹಾರ್ದತೆಗೆ ಭಂಗ ತಂದವರೆಂದು ಆರೋಪಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ಯಾವುದೇ ಕ್ರಮ ಕೈಗೊಳ್ಳುವ ನಿರ್ಣಯ ನ್ಯಾಯಾಲಯಕ್ಕೆ ಬಿಟ್ಟಿದ್ದು ಎಂದು ಹೇಳಿದೆ.
ಅಲ್ಲದೆ, ವಾಜಪೇಯಿ, ಅಡ್ವಾಣಿ ಅವರನ್ನು ವರದಿಯಲ್ಲಿ 'ಕಪಟ ಮಂದಗಾಮಿಗಳು' ಎಂದು ವ್ಯಾಖ್ಯಾನಿಸಲಾಗಿದೆ. ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿನ ಅವರ ಪಾತ್ರಕ್ಕಾಗಿ ಖಂಡಿಸಲಾಗಿದೆ. ಇವರೆಲ್ಲ ಆರ್‌ಎಸ್‌ಎಸ್ ಆದೇಶವನ್ನು ಉಲ್ಲಂಘಿಸಲು ಸಿದ್ದರಾಗಲಿಲ್ಲ. ಬಾಬರಿ ಮಸೀದಿ ಧ್ವಂಸದ ಬೌದ್ಧಿಕ ಮತ್ತು ತಾತ್ವಿಕ ಹೊಣೆಗಾರಿಕೆ ಇವರದ್ದು ಎಂದಿದೆ.
ಮಸೀದಿ ಧ್ವಂಸದಂಥ ಘಟನೆಯನ್ನು ತಡೆಯುವುದು ಅವರ ಸಾಂವಿಧಾನಿಕ ಕರ್ತವ್ಯವಾಗಿದ್ದೂ ಅವರದನ್ನು ತಡೆಯಲಿಲ್ಲ ಎಂದು ಆರೋಪಿಸಿರುವ ವರದಿ ಇವರು ನ್ಯಾಯಾಲಯ, ಜನತೆ ಮತ್ತು ದೇಶಕ್ಕೆ ಸುಳ್ಳು ಭರವಸೆಗಳನ್ನು ನೀಡಿದ್ದಾರೆ ಎಂದು ತಿಳಿಸಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಅಯೋಧ್ಯಾ ಚಳವಳಿಯ ಮೂಲ ಕರ್ತೃ ಎಂದು ಅಭಿಪ್ರಾಯಪಟ್ಟಿರುವ ಆಯೋಗ, ಈ ಚಳವಳಿಯ ಸಂಪೂರ್ಣ ಹೊಣೆಗಾರಿಕೆ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಉನ್ನತ ನಾಯಕತ್ವದ್ದಾಗಿದೆ. ಸಂಘ ಪರಿವಾರದ ಸಂಚಿನ ಕುರಿತಂತೆ ಅಡ್ವಾಣಿ, ವಾಜಪೇಯಿ ಮತ್ತು ಮುರಳಿ ಮನೋಹರ್ ಜೋಷಿಯವರಿಗೆ ಏನೂ ಅರಿವಿರಲಿಲ್ಲ ಎಂದು ಭಾವಿಸಲು ಯಾವುದೇ ಕಾರಣಗಳಿಲ್ಲ ಎಂದು ಹೇಳಿದೆ.