ಕರ್ನಾಟಕ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿಯ ಎಲ್ಲಾ ಗಣಿಗಾರಿಕೆ ಚಟುವಟಿಕೆ ಮತ್ತು ಅದಿರು ಸಾಗಾಟಕ್ಕೆ ಆಂಧ್ರಪ್ರದೇಶ ಸರ್ಕಾರ ನಿರ್ಬಂಧ ವಿಧಿಸಿದೆ.
ರೆಡ್ಡಿ ಸಹೋದರರ ಅಕ್ರಮ ಗಣಿಗಾರಿಕೆ ಮತ್ತು ಅದಿರು ಸಾಗಾಟದ ತಡೆ ಕುರಿತು ಕೂಡಲೇ ಕ್ರಮ ಕೈಗೊಳ್ಳಿ ಎಂದು ಸುಪ್ರೀಂಕೋರ್ಟ್‌ನ ಉನ್ನತಾಧಿಕಾರ ಸಮಿತಿ ನೀಡಿರುವ ಸೂಚನೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಕೆ.ರೋಸಯ್ಯ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದರಿಂದಾಗಿ ರೆಡ್ಡಿಗಳ ಮಾಲೀಕತ್ವದ ಎರಡು ಗಣಿ ಸೇರಿದಂತೆ ಅನಂತಪುರಂ ಜಿಲ್ಲೆಯ ಆರು ಗಣಿ ಕಂಪನಿಗಳ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಳ್ಳಲಿದೆ. ಇದರಲ್ಲಿ ಈಗಾಗಲೇ ಹೊರ ತೆಗೆದ ಅದಿರು ಸಾಗಟವೂ ಕೂಡ ಸೇರಿದೆ. ಸಭೆಯಲ್ಲಿ ಮುಖ್ಯಮಂತ್ರಿ ರೋಸಯ್ಯ ಅವರು ಅನಂತಪುರಂ ಜಿಲ್ಲೆಯಲ್ಲಿ ನಡೆದಿರುವ ಗಣಿಗಾರಿಕೆಗೆ ಸಂಬಂಧಿಸಿದ ಎಲ್ಲಾ ಗುತ್ತಿಗೆ ಒಪ್ಪಂದಗಳ ಕುರಿತು ಮಾಹಿತಿ ಪಡೆದುಕೊಂಡರು.