ಇತ್ತೀಚಿನ ಯುವಪೀಳಿಗೆಗಳಲ್ಲಿ ಬಹುತೇಕರಿಗೆ ತಾವು ಮುಂದೇನಾಗಬೇಕು ಎಂಬ ಕನಸುಗಳಿರುವುದು ಕಡಿಮೆ, ಆದರೆ ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ 9ನೇ ತರಗತಿ ವಿದ್ಯಾರ್ಥಿಯಾಗಿರುವ ರಾಘು ಶಾಸ್ತ್ರಿ ತಾನು ಮುಂದೆ ಏನಾಗಬೇಕು ಎಂಬ ಬಗ್ಗೆ ಸಂಕಲ್ಪ ತೊಟ್ಟಿದ್ದಾನೆ. ತನ್ನ ಭವಿತವ್ಯದ ಕನಸನ್ನು ಸಾಕಾರಗೊಳಿಸುವುದಾಗಿಯೂ ಹೇಳುವ ಮೂಲಕ ಇತರ ಯುವಪೀಳಿಗೆಗೆ ಆದರ್ಶಪ್ರಾಯನಾಗಿದ್ದಾನೆ.
ದೇಶದ ವಾಣಿಜ್ಯ ನಗರಿಯಾದ ಮುಂಬೈಯಲ್ಲಿ 2008 ನವೆಂಬರ್ 28ರಂದು ಉಗ್ರರು ನಡೆಸಿದ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ನಡೆದ ಗುಂಡಿನ ಕಾದಾಟದಲ್ಲಿ ಎನ್‌ಎಸ್‌ಜಿ ಕಮಾಂಡೋ ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಬಲಿಯಾಗಿದ್ದರು. ಇದೀಗ ಇದೇ ಮೇಜರ್ ಸಂದೀಪ್ ತನ್ನ ಪಾಲಿನ ಹೀರೋ ಎನ್ನುತ್ತಾನೆ ರಾಘು. ಆ ನಿಟ್ಟಿನಲ್ಲಿ ತಾನು ಮಿಲಿಟರಿಯನ್ನು ಸೇರಿ ದೇಶ ರಕ್ಷಣೆಗಾಗಿ ಜೀವನ ಮುಡಿಪಾಗಿಡುವುದಾಗಿ ಹೇಳಿದ್ದಾನೆ.
ಮುಂಬೈ ಉಗ್ರರ ದಾಳಿ ನಡೆದು ಬುಧವಾರ ಒಂದು ವರ್ಷವಾಗಲಿದೆ. ವರ್ಷದ ಹಿಂದಿನ ಕಹಿ ನೆನಪು ಮೆಲುಕು ಹಾಕುವ ಈ ಸಂದರ್ಭದಲ್ಲಿ ರಾಘು ಶಾಸ್ತ್ರಿ ಸಂದೀಪ್ ತನ್ನ ಪಾಲಿನ ಹೀರೋ ಎನ್ನುವ ಮೂಲಕ ಯುವಪೀಳಿಗೆಗೆ ಆದರ್ಶದ ಮುನ್ನುಡಿ ಬರೆದಿದ್ದಾನೆ.
'ಸಂದೀಪ್ ಉಣ್ಣಿಕೃಷ್ಣನ್ ಶೌರ್ಯ ಮತ್ತು ತ್ಯಾಗ ತನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿದೆ.' ಆ ನಿಟ್ಟಿನಲ್ಲಿ ನಾನು ಮಿಲಿಟರಿಯನ್ನು ಸೇರಿ ದೇಶಸೇವೆ ಮಾಡುವುದಾಗಿ ರಾಘು ಐಎಎನ್‌ಎಸ್ ಜೊತೆ ಮಾತನಾಡುತ್ತ ವಿವರಿಸಿದ್ದಾನೆ. ಸಂದೀಪ್ ಉಣ್ಣಿಕೃಷ್ಣನ್ ನನ್ನ ಪಾಲಿನ ಹೀರೋ. ಅಷ್ಟೇ ಅಲ್ಲ ತಾನು ಸಂದೀಪ್ ಅವರ ಹೆಜ್ಜೆ ಜಾಡನ್ನು ಅನುಸರಿಸುವುದಾಗಿ ರಾಘು ತಿಳಿಸಿದ್ದಾನೆ.
ದೇಶಕ್ಕಾಗಿ ಉಗ್ರರ ವಿರುದ್ಧ ಹೋರಾಡಿ ವೀರ ಸಾವನ್ನಪ್ಪಿರುವ ಸಂದೀಪ್ ಬಗ್ಗೆ ರಾಘು ಅಭಿಮಾನ ಒಂದು ತೆರನಾದರೆ, 26/11ರ ಹುತಾತ್ಮ ಸಂದೀಪ್ ಕುರಿತು ಬಿಪಿಓ ಕಂಪೆನಿಯ ಉದ್ಯೋಗಿ 25ರ ಹರೆಯದ ಪ್ರಕಾಶ್ ರಾಯ್ ಕನಸು ಮತ್ತೊಂದು ವಿಧವಾದದ್ದು. ಈತನಿಗೆ ಮಿಲಿಟರಿ ಸೇರುವ ಯಾವುದೇ ಕನಸಿಲ್ಲ. ಆದರೆ ಸ್ವಯಂಸೇವಾ ಸಂಘಟನೆಯನ್ನು ಆರಂಭಿಸುವ ಮೂಲಕ ದೇಶಕ್ಕಾಗಿ ದುಡಿಯಬೇಕು ಎನ್ನುವುದು ಬಯಕೆ.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಉಣ್ಣಿಕೃಷ್ಣನ್ ಅವರ ಜೀವನ ತನ್ನ ಮೇಲೂ ಪ್ರಭಾವ ಬೀರಿದೆ ಎಂದಿದ್ದಾರೆ. ಅಲ್ಲದೇ ಸೌಲಭ್ಯವಂಚಿತ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಾರ್ಯನಿರ್ವಹಿಸುವ ಮೂಲಕ ದೇಶ ಸೇವೆ ಮಾಡುವುದಾಗಿ ಹೇಳಿರುವ ರಾಯ್, ಶೀಘ್ರವೇ ಎನ್‌ಜಿಓವೊಂದನ್ನು ತೆರೆಯುವುದಾಗಿ ತಿಳಿಸಿದ್ದಾರೆ.
PTI
ನೆರೆಹೊರೆಯವರನ್ನೂ ಕಾಡುತ್ತಿರುವ ಸಂದೀಪ್ ನೆನಪು: ಇಸ್ರೋದ ನಿವೃತ್ತ ಅಧಿಕಾರಿ ಕೆ.ಉಣ್ಣಿಕೃಷ್ಣನ್ ಮತ್ತು ಧನಲಕ್ಷ್ಮಿ ದಂಪತಿಗಳ 31ರ ಹರೆಯದ ಪುತ್ರ ಸಂದೀಪ್ ಅಶೋಕ್ ಚಕ್ರ ಪ್ರಶಸ್ತಿ ವಿಜೇತ. ಕಳೆದ ವರ್ಷ ಉಗ್ರರ ಗುಂಡಿಗೆ ಬಲಿಯಾಗಿರುವ ಸಂದೀಪ್ ಹೆತ್ತವರಲ್ಲಿ ಈಗ ಉಳಿದಿರುವುದು ಶೋಕ ಮಾತ್ರ. ಯಲಹಂಕದಲ್ಲಿನ ಇಸ್ರೋ ಲೇಔಟ್‌ನ ನೆರೆಹೊರೆಯವರು ಕೂಡ ಸಂದೀಪ್ ಬಗ್ಗೆ ಅಭಿಮಾನ ವ್ಯಕ್ತಪಡಿಸುತ್ತಾರೆ. ಆದರೆ ಕಿರಿಯ ವಯಸ್ಸಿನಲ್ಲೇ ಅಕಾಲಿಕವಾಗಿ ಮರಣಕ್ಕೀಡಾದ ಸಂದೀಪ್ ಕುರಿತು ನೆರೆಹೊರೆಯವರು ಮರುಕ ವ್ಯಕ್ತಪಡಿಸುತ್ತಾರೆ.
'ಆತ ಯಾವಾಗಲೂ ನಗು ಮುಖದಿಂದ ಮತ್ತು ಸಂತೋಷದಿಂದ ಇರುವುದನ್ನು ಕಾಣುತ್ತಿದ್ದೆ. ನಾವೆಲ್ಲ ಆತನನ್ನು ತುಂಬಾ ಗೌರವಿಸುತ್ತಿದ್ದೇವು. ಆದರೆ ಒಬ್ಬನೇ ಒಬ್ಬ ಮಗನನ್ನು ಕಳೆದುಕೊಂಡಿರುವ ಸಂದೀಪ್‌ನ ಹೆತ್ತವರು ನೋವು ಅನುಭವಿಸುತ್ತಿದ್ದಾರೆ' ಎಂದು ಸ್ಥಳೀಯ ಉಮಾ ಅವರು ಅಭಿಪ್ರಾಯವ್ಯಕ್ತಪಡಿಸುತ್ತಾರೆ.
ಸಂದೀಪ್ ಹೆಸರಲ್ಲಿ ಟ್ರಸ್ಟ್: ಸಂದೀಪ್ ಉಗ್ರರ ಗುಂಡೇಟಿನಿಂದ ವೀರ ಮರಣವನ್ನಪ್ಪಿದ್ದರೂ ಕೂಡ ಆತನ ಕನಸುಗಳನ್ನು ಸಾಕಾರಗೊಳಿಸಲು ತಾವು ಮಗನ ನೆನಪಿನಲ್ಲಿ ಟ್ರಸ್ಟ್‌ವೊಂದನ್ನು ಸ್ಥಾಪಿಸುವುದಾಗಿ ಸಂದೀಪ್ ತಂದೆ ಉಣ್ಣಿಕೃಷ್ಣನ್ ಹೇಳಿದ್ದಾರೆ. ಆ ನಿಟ್ಟಿನಲ್ಲಿ ನಮ್ಮ ಚಾರಿಟಿ ಟ್ರಸ್ಟ್ ವಿದ್ಯಾಭ್ಯಾಸ ಮತ್ತು ಸಮಾಜದಲ್ಲಿನ ಅಶಕ್ತ ಜನ, ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಆರ್ಥಿಕ ನೆರವು ನೀಡಲಿದೆ ಎಂದು ವಿವರಿಸಿದ್ದಾರೆ.