ಬಿಎಚ್ಇಎಲ್ ತನ್ನ ಮೆಗಾ ಇಂಧನ ಸ್ಥಾವರ ಯೋಜನೆಯನ್ನು ಸ್ಥಾಪಿಸಲು ಸಿಂಗೂರನ್ನು ಆಯ್ಕೆ ಮಾಡಿಕೊಂಡಲ್ಲಿ, ಈ ಜಾಗವನ್ನು ಟಾಟಾ ಕಂಪೆನಿಯಿಂದ ಮರಳಿ ಪಡೆಯಲು ಪ್ರಕ್ರಿಯೆ ಆರಂಭಿಸಲಾಗುವುದು ಎಂಬುದಾಗಿ ಪಶ್ಚಿಮ ಬಂಗಾಳ ಸರ್ಕಾರ ಗುರವಾರ ಹೇಳಿದೆ.
"ಟಾಟಾ ಮೋಟಾರ್ಸ್ ಲಿಮಿಟೆಡ್‌ನಿಂದ ಭೂಮಿಯನ್ನು ಮರಳಿ ವಶಪಡಿಸಿಕೊಳ್ಳಲು ಯಾವುದೇ ಸಮಸ್ಯೆ ಉಂಟಾಗಲಾರದು" ಎಂಬುದಾಗಿ ಉದ್ಯಮ ಸಚಿವ ನಿರುಪಮ ಸೇನ್ ಅವರು ಈಸ್ಟರ್ನ್ ಪ್ರಿಂಟ್ ಪ್ಯಾಕ್-2009 ಸಮ್ಮೇಳನದ ಪಾರ್ಶ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನುಡಿದರು.
ಈ ತಿಂಗಳ ಆದಿಯಲ್ಲಿ ಬಿಎಚ್ಇಎಲ್ ಅಧಿಕಾರಿಗಳು ಸ್ಥಳವನ್ನು ಪರಿಶೀಲಿಸಿದ್ದು ಇಲ್ಲಿ ರಾಜ್ಯಸರ್ಕಾರವು 1600 ಮೆಗಾವ್ಯಾಟ್ ಇಂಧನ ಸ್ಥಾವರವನ್ನು ಜಂಟಿ ಉದ್ಯಮವಾಗಿ ಸ್ಥಾಪಿಸಲು ಉದ್ದೇಶಿಸಿದೆ.
ಇದೇ ಸ್ಥಳದಲ್ಲಿ ರೈಲ್ವೇಯು ರೈಲ್ವೇ ಕೋಚ್ ನಿರ್ಮಾಣ ಯೋಜನೆಯನ್ನು ಸ್ಥಾಪಿಸಲು ನಿರ್ಧರಿಸಿದೆ ಎಂಬುದಾಗಿ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಕಳೆದ ವಾರ ಹೇಳಿದ್ದರು.
ಆದರೆ ರೈಲ್ವೇ ಇಲಾಖೆಯು ಸಿಂಗೂರಿನಲ್ಲಿ ರೈಲ್ವೇ ಕೋಚ್ ಆರಂಭಿಸುವ ಕುರಿತು ಯಾವುದೇ ಪ್ರಸ್ತಾಪವನ್ನು ರೈಲ್ವೇ ಇಲಾಖೆಗೆ ಕಳುಹಿಸಿಲ್ಲ ಎಂಬುದಾಗಿ ಮುಖ್ಯಮಂತ್ರಿ ಬುದ್ದದೇವ್ ಭಟ್ಟಾಚಾರ್ಜಿ ಹೇಳಿದ್ದಾರೆ.