ಗಣಿ ಮಾಫಿಯಾ ಅತಿದೊಡ್ಡ ಅಪಾಯ ಎಂದು ಹೇಳಿರುವ ಮಾಜಿ ಪ್ರಧಾನಿ ದೇವೇಗೌಡರು, ಪಕ್ಷಾತೀತವಾಗಿ ಇದರ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದ್ದಾರೆ.
ಆಂಧ್ರ ಸರ್ಕಾರ ಅಕ್ರಮ ಗಣಿಗಾರಿಕೆ ಕುರಿತು ಈಗಾಗಲೇ ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ. ಕರ್ನಾಟಕವೂ ಸಿಬಿಐಗೆ ಕೊಡಬೇಕು ಎಂದೇನಿಲ್ಲ. ವಿಸ್ತೃತ ಅಧಿಕಾರ ವ್ಯಾಪ್ತಿ ಹೊಂದಿರುವ ಸಿಬಿಐ ಅಕ್ರಮ ಗಣಿಗಾರಿಕೆ ಕುರಿತು ಸಮಗ್ರ ತನಿಖೆ ನಡೆಸಬಹುದು ಎಂದು ಅವರು ಅಭಿಪ್ರಾಯಿಸಿದ್ದಾರೆ.
ಇದೇವೇಳೆ, ಅಕ್ರಮ ಗಣಿಗಾರಿಕೆ ವಿರುದ್ಧ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗುದೇಶಂ ಮುಖಂಡ ಚಂದ್ರಬಾಬು ನಾಯ್ಡು ನಡೆಸುತ್ತಿರುವ ಹೋರಾಟಕ್ಕೆ ದೇವೇಗೌಡ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ ರೆಡ್ಡಿ ಸಹೋದರರ ವಿರುದ್ಧ ಸಮರ ಸಾರಿರುವ ಚಂದ್ರಬಾಬು ನಾಯ್ಡು ಗುರುವಾರ ಸಂಜೆ ವಿವಿಧ ಪಕ್ಷಗಳ ಬೆಂಬಲ ಯಾಚಿಸಲು ದೆಹಲಿಗೆ ಧಾವಿಸಿದರು. ಹೈದರಾಬಾದ್‌ನಿಂದ ವಿಮಾನದಲ್ಲಿ ಬಂದ ಅವರು ವಿಮಾನ ನಿಲ್ದಾಣದ ಗಣ್ಯರ ಲೌಂಜ್‌ನಲ್ಲಿ ಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಉಭಯ ನಾಯಕರ ನಡುವೆ ಸುಮಾರು ಒಂದು ಗಂಟೆ ಮಾತುಕತೆ ನಡೆದಿದ್ದು, ಈ ವೇಳೆ ತಮ್ಮ ಹೋರಾಟ ಬೆಂಬಲಿಸುವಂತೆ ನಾಯ್ಡು ಮಾಜಿ ಪ್ರಧಾನಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಯಾಗಿ ಎಲ್ಲ ಸಹಕಾರ ನೀಡುವುದಾಗಿ ದೇವೇಗೌಡರು ಭರವಸೆ ನೀಡಿದರು.