ಮುಂಬೈ ದಾಳಿಯ ವೇಳೆ ತನ್ನ ಪಾತ್ರದ ಕುರಿತು ವಿನಿತಾ ಕಾಮ್ಟೆ ತನ್ನ ಪುಸ್ತಕದಲ್ಲಿ ಮಾಡಿರುವ ಆಪಾದನೆಗಳನ್ನು ಸ್ಪಷ್ಟಪಡಿಸದೇ ಇದ್ದರೆ ತಾನು ಸ್ಥಾನ ತ್ಯಜಿಸುವುದಾಗಿ ಮುಂಬೈ ಜಂಟಿ ಆಯುಕ್ತ ರಾಕೇಶ್ ಮಾರಿಯ ಬೆದರಿಕೆ ಹಾಕಿದ್ದಾರೆ.
ಮುಂಬೈ ದಾಳಿಯ ವೇಳೆಗೆ ಹತರಾಗಿರುವ ಐಪಿಎಸ್ ಅಧಿಕಾರಿ ಅಶೋಕ್ ಕಾಮ್ಟೆ ಅವರ ಪತ್ನಿ ಆಗಿರುವ ವಿನಿತಾ ಕಾಮ್ಟೆ, ತಾನು ಬರೆದಿರುವ ಪುಸ್ತಕ 'ದಿ ಲಾಸ್ಟ್ ಬುಲೆಟ್'ನಲ್ಲಿ, ಹೆಚ್ಚುವರಿ ಪೊಲೀಸ್ ಆಯುಕ್ತ(ಪಶ್ಚಿಮ)ರಾಗಿದ್ದ ಅಶೋಕ್ ಕಾಮ್ಟೆ ಅವರು ಕಾಮಾ ಆಸ್ಪತ್ರೆಗೆ ತೆರಳಿದ್ದ ವಿಚಾರ ತನಗೆ ತಿಳಿದಿರಲಿಲ್ಲ ಎಂದು ತಿರಸ್ಕರಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಉಗ್ರರು 59 ಗಂಟೆಗಳ ಕಾಲ ಅಟ್ಟಹಾಸಗೈದ ವೇಳೆ ಮಾರಿಯ ಅವರು ಪೊಲೀಸ್ ಕಂಟ್ರೋಲ್ ರೂಂನ ಜವಾಬ್ದಾರಿ ವಹಿಸಿದ್ದಾಗ ಅವರಿಗೆ ಇದು ಹೇಗೆ ತಿಳಿದಿರಲಿಲ್ಲ ಎಂದು ವಿನಿತಾ ಪ್ರಶ್ನಿಸಿದ್ದಾರೆ.
ತನ್ನ ಪತಿ ಅಶೋಕ್ ಕಾಮ್ಟೆಗೆ ಕಾಮಾ ಆಸ್ಪತ್ರೆಗೆ ತೆರಳಲು ತಾನು ಹೇಳಿರಲಿಲ್ಲ ಎಂಬುದಾಗಿ ಮಾರಿಯ ತಿರಸ್ಕರಿಸಿರುವುದನ್ನೂ ವಿನಿತ ತನ್ನ ಪುಸ್ತಕದಲ್ಲಿ ಟೀಕಿಸಿದ್ದಾರೆ.
ಕಾಮ್ಟೆ ಆಪಾದನೆಗಳನ್ನು ಸ್ಪಷ್ಟ ಪಡಿಸಬೇಕು ಮತ್ತು ಇದರ ವಿರುದ್ಧ ಕ್ರಮಕೈಗೊಳ್ಳುವಂತೆ ಮಾರಿಯಾ ಅವರು ಮಹಾರಾಷ್ಟ್ರ ಗೃಹಸಚಿವ ಆರ್.ಆರ್. ಪಾಟೀಲ್ ಅವರಿಗೆ ಪತ್ರ ಬರೆದಿದ್ದು, ಅವರನ್ನು ಭೇಟಿಯಾಗಲು ಸಿದ್ಧತೆ ನಡೆಸಿದ್ದಾರೆ. ಅಲ್ಲದೆ, ಈ ಎಲ್ಲಾ ಆಪಾದನೆಗಳು ಆಧಾರ ರಹಿತ ಎಂದಿರುವ ಮಾರಿಯಾ, ತನಗೆ ಸಮರ್ಥನೆಗೆ ಅವಕಾಶ ನೀಡಬೇಕು ಎಂದು ಕೋರಿದ್ದಾರೆ.
ಈ ಮಧ್ಯೆ, ಅಧಿಕಾರದಲ್ಲಿರುವವರು ತನಗೆ ಮಾಹಿತಿ ನೀಡಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ತಾನು ಈ ಎಲ್ಲಾ ಮಾಹಿತಿಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಕಲೆ ಹಾಕಿರುವುದಾಗಿ ವಿನಿತಾ ಹೇಳಿದ್ದಾರೆ.
ವಿನಿತಾ ಬರೆದಿರುವ ಈ ಪುಸ್ತಕವನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ. ಸಾಮಾಜಿಕ ಕಾರ್ಯಕರ್ತೆ ಅರುಣಾ ರಾಯ್ ಹಾಗೂ ಮಾಜಿ ಪೊಲೀಸ್ ಅಯುಕ್ತ ಜುಲಿಯೋ ರೊಬೆರಿಯೋ ಅವರುಗಳು ಪುಸ್ತಕ ಬಿಡುಗಡೆ ಮಾಡಿದರು. ಈ ಕಾರ್ಯಕ್ರಮವನ್ನು ಹೋಟೇಲ್ ತಾಜ್ ಮಹಲ್‌ನಲ್ಲಿ ಸಂಘಟಿಸಲಾಗಿತ್ತು.