ತನ್ನ ಸಹೋದರನ ಹತ್ಯಾ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರವೀಣ್ ಮಹಾಜನ್‌ರನ್ನು 14 ದಿನಗಳ ಅವಧಿಗೆ ಪೆರೋಲ್ ಮೇಲೆ ಶುಕ್ರವಾರ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಬಿಜೆಪಿ ಮುಖಂಡ ಪ್ರಮೋದ್ ಮಹಾಜನ್ ಹತ್ಯೆ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ದೋಷಿ ಎಂದು ತೀರ್ಮಾನಿಸಲ್ಪಟ್ಟು ಶಿಕ್ಷೆಗೀಡಾಗಿರುವ ಪ್ರವೀಣ್ ಪ್ರಸಕ್ತ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.
"ವೈಯಕ್ತಿಕ ಆರೋಗ್ಯದ ಕಾರಣದಿಂದಾಗಿ ಅವರು ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ" ಎಂದು ಪ್ರವೀಣ್ ಮಹಾಜನ್ ಅವರ ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ.
ಸಹೋದರ ಪ್ರಮೋದ್ ಮಹಾಜನ್ ಹತ್ಯೆ ಪ್ರಕರಣದಲ್ಲಿ ಪ್ರವೀಣ್ ಮಹಾಜನ್ ಅವರನ್ನು ಅಪರಾಧಿ ಎಂದು ತೀರ್ಮಾನಿಸಿ ಮುಂಬೈ ಕೋರ್ಟ್ 2007ರ ಡಿಸೆಂಬರ್‌ನಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಪ್ರಮೋದ್ ನಿವಾಸಕ್ಕೆ ತೆರಳಿದ್ದ ಪ್ರವೀಣ್ ತನ್ನ ಅಣ್ಣನನ್ನು ಪಿಸ್ತೂಲ್‌ನಿಂದ ಗುಂಡಿಕ್ಕಿದ್ದರು. ಬಳಿಕ ಸಾವುಬದುಕಿನ ನಡುವೆ ಹೋರಾಟ ನಡೆಸಿದ್ದ ಪ್ರಮೋದ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.