ಅತ್ಯಂತ ಅಚ್ಚರಿಯ ಬೆಳವಣಿಗೆ ಎಂಬಂತೆ, ಶಿವಾಸೇನಾ ಮುಖ್ಯಸ್ಥ ಬಾಳಾಠಾಕ್ರೆ ಕುಟುಂಬದ ಸದಸ್ಯರೊಬ್ಬರು ಕಾಂಗ್ರೆಸ್ ಸೇರಲು ಸನ್ನದ್ಧರಾಗಿದ್ದಾರೆ.
"ತಾನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಪುತ್ರ ರಾಹುಲ್ ಗಾಂಧಿ ಅವರುಗಳ ಬಹುದೊಡ್ಡ ಅಭಿಮಾನಿಯಾಗಿದ್ದು, ಅವರು ದೇಶಕ್ಕಾಗಿ ಮಾಡುತ್ತಿರುವ ಮಾಡುತ್ತಿರುವ ಕಾರ್ಯದ ಭಾಗವಾಗಲು ಇಚ್ಚಿಸಿದ್ದೇನೆ" ಎಂಬುದಾಗಿ ಹೇಳಿದ್ದಾರೆಂದು ಮಾಧ್ಯಮ ವರದಿಗಳು ತಿಳಿಸಿವೆ.
ಬಾಳಾಠಾಕ್ರೆ ಕುಟುಂಬದ ಹಿರಿಯ ಸೊಸೆಯಾಗಿರುವ ಸ್ಮಿತಾ ಅವರ ಈ ನಿರ್ಧಾರಕ್ಕೆ ಎರಡು ಕಾರಣಗಳಿವೆ. ಒಂದನೆಯದ್ದಾಗಿದ್ದು ಶಿವಸೇನೆಯು ಅದರ ಸಂಕುಚಿತ ಮತ್ತು ವಿಭಜಕ ನೀತಿಯಿಂದ ಮಹಾರಾಷ್ಟ್ರಿಗರಿಗೆ ಅನ್ಯಾಯ ಎಸಗುತ್ತಿದೆ. ಎರಡನೆಯದಾಗಿ ಕಾಂಗ್ರೆಸ್ ಸಿದ್ಧಾಂತ ಅತ್ಯಂತ ಹಿತದಾಯಕವಾಗಿದ್ದು, ರಾಷ್ಟ್ರಾದ್ಯಂತ ಸೋನಿಯಾ ಕುಟುಂಬಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ರಾಷ್ಟ್ರ ಮತ್ತು ಪಕ್ಷವನ್ನು ಸೋನಿಯಾ ಅವರು ನಡೆಸಿಕೊಂಡು ಹೋಗುತ್ತಿರುವ ನೀತಿ ನಿಜವಾಗಿಯು ಮೆಚ್ಚುಗೆದಾಯಕವಾಗಿದೆ. ರಾಹುಲ್ ಗಾಂಧಿ ಅವರು ಯಾವುದೇ ಸ್ಥಾನಾಕಾಂಕ್ಷಿಯಾಗದೇ ಇದ್ದರೂ ಅವರು ದೇಶಕ್ಕಾಗಿ ಕಾರ್ಯ ಎಸಗುತ್ತಿದ್ದಾರೆ ಎಂದು ಅವರು ನುಡಿದರು.
ತಾನು ಕಾಂಗ್ರೆಸ್‌ನ ಹಿರಿಯ ನಾಯಕರೊಂದಿಗೆ ಸಂಪರ್ಕ ಇರಿಸಿಕೊಂಡಿದ್ದು, ಪಕ್ಷಕ್ಕೆ ಯಾವಾಗ ಸೇರಬೇಕು ಎಂಬುದೇ ಈಗ ಉಳಿದಿರುವ ವಿಚಾರ. ತಾನು ಶೀಘ್ರವೇ ದೆಹಲಿಗೆ ತೆರಳಿ, ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿಯಾಗುವುದಾಗಿ ತಿಳಿಸಿದರು.
ಕಾಂಗ್ರೆಸ್‌ಗೆ ಇದೊಂದು ದೊಡ್ಡ ಮೀನಾಗಿದ್ದು, ಸ್ಮಿತಾಗೆ ಕಾಂಗ್ರೆಸ್‌ನಲ್ಲಿ ಉತ್ತಮ ಸ್ಥಾನ ನೀಡುವುದು ಖಚಿತ ಎಂಬುದಾಗಿ ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.