ಜಿಂದ್ (ಹರ್ಯಾಣ), ಶನಿವಾರ, 28 ನವೆಂಬರ್ 2009( 13:17 IST )
ಆ ದಂಪತಿಗೆ ಮಕ್ಕಳ ಯೋಗ ಲಭಿಸಿದ್ದು ವಿವಾಹವಾಗಿ 55 ವರ್ಷಗಳ ಬಳಿಕ. 69 ವರ್ಷದಲ್ಲಿ ರಾಜೋದೇವಿ ಮಗಳನ್ನು ಹೆತ್ತು ವಿಶ್ವದ ಅತ್ಯಂತ ಹಿರಿಯ ತಾಯಿ ಎಂಬುದಾಗಿ ಕರೆಸಿಕೊಂಡಿದ್ದರು. ಶುಕ್ರವಾರ ಈ ಮಗುವಿನ ಮೊದಲ ಹುಟ್ಟುಹಬ್ಬ. ಮಗುವಿನ ಹುಟ್ಟುಹಬ್ಬದ ಸಂಭ್ರದಲ್ಲಿರುವ ತಾಯಿ ತಾನು ಇನ್ನೂ ಒಂದು ಮಗುವಿಗೆ ಜನ್ಮನೀಡಲು ಸಿದ್ಧವಿರುವುದಾಗಿ ಹೇಳಿ ಇಳಿ ವಯಸ್ಸಿನಲ್ಲೂ ತನ್ನ ಕುಂದದ ಉತ್ಸಾಹ ವ್ಯಕ್ತಪಡಿಸಿದ್ದಾರೆ.
2008ರ ನವೆಂಬರ್ 27ರಂದು ರಾಜೋದೇವಿ ಅವರು ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದರು. ಇನ್-ವಿಟ್ರೋ ಫರ್ಟಿಲಿಟಿ(ಐವಿಎಫ್) ಚಿಕಿತ್ಸೆ ಮೂಲಕ ಗರ್ಭಧರಿಸಿದ್ದು, ಮಗುವಿಗೆ ನವೀನ್ ಲೋಹಾನ್ ಎಂಬುದಾಗಿ ನಾಮಕರಣ ಮಾಡಲಾಗಿತ್ತು.
"ನಾವು ತುಂಬ ಸಂತಸಗೊಂಡಿದ್ದೇವೆ. ಕಳೆದೊಂದು ವರ್ಷದಲ್ಲಿ ಮಗುವನ್ನು ನೋಡಿಕೊಳ್ಳಲು ನಮಗೆ ಯಾವುದೇ ಸಮಸ್ಯೆ ಆಗಿರಲಿಲ್ಲ. ಈ ಮಗು ಗಂಡುಮಗುವಿಗೆ ಸಮವಾಗಿದೆ. ನಮ್ಮದು ದೊಡ್ಡ ಕೂಡುಕುಟುಂಬವಾಗಿರುವ ಕಾರಣ ಒಬ್ಬರಿಲ್ಲದಿದ್ದರೆ ಒಬ್ಬರು ಮಗುವನ್ನು ನೋಡಿಕೊಳ್ಳುತ್ತಾರೆ" ಎಂದು ಅವರು ಹೇಳಿದ್ದಾರೆ.
ಬಲರಾಮ್(73) ಎಂಬವರನ್ನು ರಾಜೋ ದೇವಿ ತನ್ನ 15ನೆ ವಯಸ್ಸಿನಲ್ಲಿ ವರಿಸಿದ್ದರು. ಆದರೆ ಈ ದಂಪತಿ ತಮ್ಮ ಮೊದಲ ಮಗುವಿನ ಮುಖ ನೋಡಲು 55 ವರ್ಷಗಳ ಕಾಲ ಕಾಯಬೇಕಾಯಿತು. ಬಲರಾಮ್ ಅವರಿಗೆ ವಿವಾಹ ಕಾಲಕ್ಕೆ 17 ವರ್ಷ ವಯಸ್ಸು. ಅವರಿಗೀಗ ತನ್ನ ಪುತ್ರಿಯ ಬಗ್ಗೆ ಹೆಮ್ಮೆ. ಆಕೆಯನ್ನು ವೈದ್ಯೆ ಅಥವಾ ಪೈಲಟ್ ಆಗಿಸಬೇಕೆಂಬುದು ಅವರ ಆಸೆ.
ಮಗುವಿಗೆ ಏನೆಲ್ಲಾ ಸೌಕರ್ಯ ಬೇಕೋ ಅದನ್ನೆಲ್ಲ ನೀಡಲು ನಾವು ಸಿದ್ಧರಿದ್ದೇವೆ. ಆಕೆ ಏನು ಬೇಕಿದ್ದರೂ ಆಗಬಹುದು. ಆದರೆ ಆಕೆ ವೈದ್ಯೆ ಅಥವಾ ಪೈಲಟ್ ಆಗಬೇಕು ಎಂಬುದು ತನ್ನ ಆಸೆ ಎಂದು ಬಲರಾಂ ಹೇಳುತ್ತಾರೆ.
ಮಕ್ಕಳಿಲ್ಲ ಎಂಬ ಕಾರಣಕ್ಕೆ ಸಾಮಾಜಿಕ ಅವಮಾನ ಎದುರಿಸಿದ್ದ ಈ ದಂಪತಿಗಳು, ಹರ್ಯಾಣದ ಹಿಸ್ಸಾರ್ ಪಟ್ಟಣದಲ್ಲಿರುವ ನ್ಯಾಶನಲ್ ಫರ್ಟಿಲಿಟಿ ಕೇಂದ್ರವನ್ನು ಸಂಪರ್ಕಿಸಿದ್ದು ತಮ್ಮ ಕೂಸಿನ ಕನಸನ್ನು ನನಸು ಮಾಡಿಕೊಂಡಿದ್ದರು.