ತನ್ನ ಅಳಿಯ ಅಮಾಯಕ, ಆದರೆ ಡೆನ್ಮಾರ್ಕಿನ ಪತ್ರಿಕೆಯಲ್ಲಿ ಪ್ರವಾದಿ ಮೊಹಮ್ಮದ್ ಅವರ ವ್ಯಂಗ್ಯಚಿತ್ರ ಪ್ರಕಟಗೊಂಡಿದ್ದರಿಂದ ಆತ ಕ್ಷೋಭೆಗೀಡಾಗಿದ್ದ ಎಂಬುದಾಗಿ ಎಫ್‌ಬಿಐ ಬಂಧನಕ್ಕೀಡಾಗಿರುವ ಶಂಕಿತ ಲಷ್ಕರೆ ಉಗ್ರ ತಹವೂರ್ ಹುಸೇನ್ ರಾಣಾನ ಅತ್ತೆಯೊಬ್ಬಾಕೆ ಹೇಳಿದ್ದಾರೆ.
"ಆತನೊಬ್ಬ ಧಾರ್ಮಿಕ ಶ್ರದ್ಧೆಯ ವ್ಯಕ್ತಿಯಾಗಿದ್ದು ಆತ ಉಗ್ರವಾದಿ ಕೃತ್ಯದ ಸಂಚು ಹೂಡುತ್ತಾನೆಂದು ತನಗನಿಸುವುದಿಲ್ಲ. ಡೆನ್ಮಾರ್ಕ್ ವ್ಯಂಗ್ಯಚಿತ್ರಕಾರನ ವಿರುದ್ಧ ನಾನು ಮಾಧ್ಯಮಗಳ ಎದುರು ಪ್ರತಿಭಟನೆ ಮಾಡಿರುವುದಾಗಿ ಆತ ಹೇಳಿದ್ದ. ಇದಕ್ಕಾಗಿ ಆತನನ್ನು ಅಮೆರಿಕವು ಅಪಪ್ರಚಾರ ಮಾಡಲು ಬಳಸಿಕೊಳ್ಳುತ್ತಿದೆ" ಎಂಬುದಾಗಿ ರಾಣಾನ ಅತ್ತೆ ಸುರೈಯಾ ಬಾನೂ ಟಿವಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.
ಪಾಕಿಸ್ತಾನ ಮೂಲದ ಅಮೆರಿಕ ಪ್ರಜೆ ಡೇವಿಡ್ ಹೆಡ್ಲಿಯೊಂದಿಗೆ ರಾಣಾನನ್ನು ಬಂಧಿಸಲಾಗಿದ್ದು. ಈ ಇಬ್ಬರು ಭಾರತ ಹಾಗೂ ಡೆನ್ಮಾರ್ಕ್‌ನಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ಹೂಡಲು ಸಂಚು ಮಾಡಿದ್ದರೆಂದು ಆರೋಪಿಸಲಾಗಿದ್ದು ತನಿಖೆ ನಡೆಯುತ್ತದೆ.
ರಾಣಾ ಸಹ ಭಾರತಕ್ಕೆ ಹಲವು ಬಾರಿ ಭೇಟಿ ನೀಡಿದ್ದು, ಇದಕ್ಕೂ ರಾಷ್ಟ್ರದಲ್ಲಿ ನಡೆದ ಉಗ್ರವಾದಿ ದಾಳಿಗಳಿಗೂ ಸಂಬಂಧವಿದೆಯೇ ಎಂಬುದಾಗಿ ತನಿಖಾಸಂಸ್ಥೆಗಳು ತನಿಖೆ ನಡೆಸುತ್ತಿವೆ.