ಸಯೀದ್‌ಗೆ ಶಿಕ್ಷೆ ವಿಧಿಸಲು ಪಾಕ್‌ಗೆ ಇಚ್ಛಾಶಕ್ತಿ ಇಲ್ಲ: ತರೂರ್
ಪಾಕಿಸ್ತಾನ, ಶನಿವಾರ, 28 ನವೆಂಬರ್ 2009( 18:48 IST )
ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್‌ನನ್ನು ಶಿಕ್ಷಿಸಲು ಪಾಕಿಸ್ತಾನಕ್ಕೆ ಇಚ್ಛಾಶಕ್ತಿ ಇಲ್ಲ ಎಂಬುದಾಗಿ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯಸಚಿವ ಶಶಿ ತರೂರ್ ಹೇಳಿದ್ದಾರೆ.
ಸಯೀದ್ ವಿರುದ್ಧ ಸಾಕಷ್ಟು ಪುರಾವೆಗಳನ್ನು ನೀಡುವಲ್ಲಿ ಭಾರತವು ಸೋತಿದೆ ಎಂಬ ಪಾಕಿಸ್ತಾನ ವಿದೇಶಾಂಗ ಸಚಿವ ಖುರೇಷಿ ಹೇಳಿಕೆಗೆ ತರೂರ್ ಈ ಮೂಲಕ ತಿರುಗೇಟು ನೀಡಿದ್ದಾರೆ. ಅಲ್ಲದೆ, ಪಾಕಿಸ್ತಾನದ ಮಾತಿಗೂ ಕ್ರಿಯೆಗೂ ಹೋಲಿಕೆ ಇಲ್ಲ ಎಂದೂ ಅವರು ಚಚ್ಚಿದ್ದಾರೆ.
"ಪಾಕಿಸ್ತಾನದಲ್ಲಿ ಸಾಕಷ್ಟು ಪುರಾವೆಗಳಿವೆ. ಆದರೆ ಪಾಕಿಸ್ತಾನವು ಪುರಾವೆಗಳಿಲ್ಲ ಎಂದು ಹೇಳುತ್ತಿರುವುದು, ಪಾಕಿಸ್ತಾನದ ತನಿಖಾ ಸಾಮರ್ಥ್ಯವು ಇರಬೇಕಾದಷ್ಟು ಇಲ್ಲದಿರುವುದನ್ನು ಸೂಚಿಸುತ್ತದೆ" ಎಂಬುದಾಗಿ ಸುದ್ದಿಗಾರರೊಂದಿಗೆ ತರೂರ್ ಹೇಳಿದರು.
ಸಮಗ್ರ ಮಾತುಕತೆಗೂ ಸಯೀದ್ ವಿರುದ್ಧ ಕ್ರಮಕೈಗೊಳ್ಳದೇ ಇರುವುದಕ್ಕೂ ಸಂಬಂಧ ಕಲ್ಪಿಸುತ್ತಿರುವ ಭಾರತಕ್ಕೆ ದೃಷ್ಟಿದೋಷವಿದೆ ಎಂಬುದಾಗಿ ಖುರೇಷಿ ಟಿವಿ ವಾಹಿನಿಯೊಂದಕ್ಕೆ ನೀಡಿದ್ದ ಹೇಳಿಕೆಯಲ್ಲಿ ಟೀಕಿಸಿದ್ದರು.
ಭಾರತದತ್ತ ಬಂದೂಕು ಹಿಡಿದಿರುವಾಗ ಶಾಂತಿ ಮಾತುಕತೆ ಸಾಧ್ಯವಿಲ್ಲ ಎಂದು ತರೂರ್ ಹೇಳಿದ್ದಾರೆ.