ಕೈಗಾ ಅಣುಶಕ್ತಿ ಸ್ಥಾವರದ ವಾಟರ್ ಕೂಲರ್‌ನಲ್ಲಿ ವಿಕಿರಣ ಸೋರಿಕೆಯು ವಿಧ್ವಂಸಕಾರಿ ಎಂಬುದಾಗಿ ಅಣುಶಕ್ತಿ ಆಯೋಗದ ಮುಖ್ಯಸ್ಥ ಅನಿಲ್ ಕಾಕೋಡ್ಕರ್ ಹೇಳಿದ್ದಾರೆ. ಅಣುಸ್ಥಾವರದಲ್ಲಿ ವಿಕಿರಣ ಸೋರಿಕೆಯಿಂದಾಗಿ ಸುಮಾರು 50 ಮಂದಿ ಅಸ್ವಸ್ಥರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ದುಷ್ಕೃತ್ಯ ಎಸಗಿರುವವರನ್ನು ಅಣುಶಕ್ತಿ ಹಾಗೂ ಇತರ ಕಾಯ್ದೆಗಳ ಪ್ರಕಾರ ತನಿಖೆಯ ಬಳಿಕ ಶಿಕ್ಷಿಸಲಾಗುವುದು ಎಂದೂ ಅವರು ಹೇಳಿದ್ದಾರೆ.
"ಯಾರೋ ಉದ್ದೇಶಪೂರ್ವಕವಾಗಿ ಈ ಟ್ರಿಟಿಯಮ್ ವಾಟರ್ ವಯಲ್‌ಗಳನ್ನು ಕುಡಿಯುವ ನೀರಿನ ವಾಟರ್ ಕೂಲರ್‌ಗೆ ಹಾಕಿದ್ದಾರೆ. ಹಾಗಾಗಿ ಈ ಕೆಡುಕಿನ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದಾದಿ ತನಿಖೆ ನಡೆಸುತ್ತಿದೆ" ಎಂದು ಅವರು ನುಡಿದರು.
ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣುಸ್ಥಾವರದ ಮೊದಲ ನಿರ್ವಹಣಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ 45ರಿಂದ 50 ಉದ್ಯೋಗಿಗಳು ಅಸ್ವಸ್ಥಗೊಂಡಿದ್ದರು. ಕೂಲರ್‌ನ ನೀರು ಕುಡಿದ ಬಳಿಕ ಅಸ್ವಸ್ಥಗೊಂಡ ಇವರನ್ನು ಸ್ಥಾವರದ ಮಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಟ್ರಿಟಿಯಮ್ ಎಂಬುದು ಹೈಡ್ರೋಜನ್‌ನ ರೇಡಿಯೋ ಆಕ್ಟಿವ್ ಆಗಿದ್ದು ಇದನ್ನು ಫ್ಯೂಜನ್ ರಿಯಾಕ್ಟರ್‌ಗಳು ಮತ್ತು ನ್ಯೂಟ್ರಾನ್ ಜನರೇಟರ್‌ಗಳ ಸಂಶೋಧನೆಗೆ ಬಳಸಲಾಗುತ್ತದೆ.